ಅಖಿಲೇಶ್‌ಗೆ ಶಿವಪಾಲ್ ಸವಾಲು ಹೊಸ ಪಕ್ಷ ರಚನೆ

ನವದೆಹಲಿ, ಆ. ೨೯- ಉತ್ತರಪ್ರದೇಶದ ಪ್ರಮುಖ ರಾಜಕೀಯ ಪಕ್ಷವಾದ ಸಮಾಜವಾದಿ ಪಕ್ಷದಲ್ಲಿಯ ಕೌಟುಂಬಿಕ ಕಲಹಕ್ಕೆ ಹೊಸ ತಿರುವು ಸಿಕ್ಕಿದೆ.
ಪಕ್ಷದಲ್ಲಿ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಮತ್ತು ಚಿಕ್ಕಪ್ಪ ಶಿವಪಾಲ್ ಸಿಂಗ್ ಯಾದವ್ ನಡುವಿನ 2 ವರ್ಷಗಳ ತಿಕ್ಕಾಟ ಕೊನೆಘಟ್ಟ ಮುಟ್ಟಿದ್ದು, ಹೊಸ ಸಮಾಜ ವಾದಿ ಪಕ್ಷ ಹುಟ್ಟು ಹಾಕುವುದಾಗಿ ಶಿವಪಾಲ್ ಸಿಂಗ್ ಯಾದವ್ ಹೇಳಿದ್ದಾರೆ. ಪಕ್ಷದಿಂದ ನಿರ್ಗಮಿಸಿ, ಹೊಸ ಪಕ್ಷವಾದ `ಜಾತ್ಯಾತೀತ ಸಮಾಜ ವಾದಿ ಮೋರ್ಚಾ` ರಚಿಸುವ ನಿರ್ಧಾರಕ್ಕೆ ಶಿವಪಾಲ್ ಯಾದವ್ ಬಂದಿದ್ದಾರೆ. ಈ ತೀರ್ಮಾನ ಸಮಾಜವಾದಿ ಪಕ್ಷದಲ್ಲಿ ಭಾರೀ, ಬಿರುಕನ್ನು ಮೂಡಿಸಲಿದೆ.
`ಪಕ್ಷದಲ್ಲಿ ತಮಗೆ ಯಾವುದೇ ಜವಾಬ್ದಾರಿಯನ್ನು ನೀಡಿಲ್ಲ. ಹೀಗಾಗಿ ನಾನು ಸಮಾಜವಾದಿ ಪಕ್ಷದಿಂದ ನಿರ್ಗಮಿಸಿ ಹೊಸ ಪಕ್ಷ ಸ್ಥಾಪಿಸುವ ನಿರ್ಧಾರಕ್ಕೆ ಬಂದಿದ್ದೇನೆ` ಎಂದು ಶಿವಪಾಲ್ ಯಾದವ್ ಹೇಳಿದ್ದಾರೆ.
ಕಳೆದ ಎರಡು ವರ್ಷಗಳಲ್ಲಿ ಚಿಕ್ಕಪ್ಪ ಶಿವಪಾಲ್ ಯಾದವ್ ಮತ್ತು ಅಖಿಲೇಶ್ ನಡುವೆ ಶೀತಲ ಸಮರ ನಡೆಯುತ್ತಿದೆ. ಪಕ್ಷದ ರಾಜ್ಯಾಧ್ಯಕ್ಷ ಸ್ಥಾನದಲ್ಲಿದ್ದ ಶಿವಪಾಲ್ ಯಾದವ್ ಅವರನ್ನು ಅಖಿಲೇಶ್ ಅನಾಮತ್ತ ಗೊಳಿಸಿದ್ದರು.
ತುರ್ತಾಗಿ ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿ ಕರೆದು, ಪಕ್ಷದ ಅಧಿನಾಯಕ ಹಾಗೂ ತಂದೆ ಮುಲಾಯಂ ಸಿಂಗ್ ಸ್ಥಾನದಲ್ಲಿ, ಅಖಿಲೇಶ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದರು.
ಈ ಘಟನೆಗಳಿಂದ ಸ್ವತಃ ನೊಂದಿದ್ದ ಮುಲಾಯಂ ಸಿಂಗ್ ಯಾದವ್ ಸಹೋದರ ಶಿವಪಾಲ್ ಯಾದವ್ ಕಡೆ ವಾಲಿದ್ದರು ಹಾಗೂ ಅವರ ಬೆಂಬಲಕ್ಕೆ ನಿಂತಿದ್ದರು.
ಮುಂದಿನ ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಅತಿ ದೊಡ್ಡ ರಾಜ್ಯವಾದ ಉತ್ತರ ಪ್ರದೇಶದಲ್ಲಿಯ ಪ್ರಮುಖ ವಿರೋಧ ಪಕ್ಷದಲ್ಲಿ ಬಿರುಕು ಮೂಡಿರುವುದು, ವಿರೋಧ ಒಕ್ಕೂಟಕ್ಕೂ ಹಿನ್ನೆಡೆಯಾಗಿದೆ.
ಉತ್ತರ ಪ್ರದೇಶದಲ್ಲಿ ಬಿಜೆಪಿಯನ್ನು ಸಮರ್ಥವಾಗಿ ಎದುರಿಸಲು ಎಸ್.ಪಿ. ಮತ್ತು ಬಿ.ಎಸ್.ಪಿ ಸಮರ್ಥವಾಗಿವೆ ಎಂಬ ಧೈರ್ಯ ವಿರೋಧ ಒಕ್ಕೂಟದಲ್ಲಿ ಮೂಡಿತ್ತು. ಆದರೆ ಈಗಿನ ಬೆಳವಣಿಗೆ ಲೆಕ್ಕಚಾರವನ್ನು ತಿರುವು, ಮರವು ಗೊಳಿಸಿದೆ.

Leave a Comment