ಅಖಂಡ ಕರ್ನಾಟಕದ ಅಭಿವೃದ್ಧಿಗೆ ಬಿಎಸ್‌ವೈ ಕರೆ

  • ಕೆ.ಎನ್.ವಿಜಯ ಕುಮಾರ ಸ್ವಾಮಿ

ಧಾರವಾಡ, (ಅಂಬಿಕಾತನಯದತ್ತ ವೇದಿಕೆ) ಜ.೬- ಉತ್ತರ ಕರ್ನಾಟಕವನ್ನು ಸಮಗ್ರವಾಗಿ ಅಭಿವೃದ್ಧಿ ಪಡಿಸಬೇಕು. ಅಖಂಡ ಕರ್ನಾಟಕದ ಸಮಗ್ರ ಅಭಿವೃದ್ಧಿ ಎಲ್ಲರ ಗುರಿಯಾಗಬೇಕು. ಉತ್ತರ ಕರ್ನಾಟಕ ಪ್ರತ್ಯೇಕತೆಯ ಕೂಗು ಕೇಳಿ ಬರಬಾರದು ಎಂದು ಹೇಳಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಪ್ರತ್ಯೇಕ ಕೂಗು ಹುಟ್ಟು ಹಾಕಿದವರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಪ್ರಧಾನ ವೇದಿಕೆಯಲ್ಲಿ ನಾಡಿನ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 50 ಮಂದಿ ಸಾಧಕರನ್ನು ಸನ್ಮಾನಿಸಿ ಮಾತನಾಡಿದ ಅವರು ರಾಜಕಾರಣಿಗಳು ಅಖಂಡ ಕರ್ನಾಟಕವನ್ನು ಪ್ರತಿಪಾದಿಸಬೇಕು. ರಾಜಕಾರಣಿಗಳಲ್ಲಿ ಭಿನ್ನತೆಯ ಕೂಗು ಕೇಳಿ ಬರಬಾರದು ಎಂದು ಅವರು ಹೇಳಿದ್ದಾರೆ.

ನಾನು ಮುಖ್ಯಮಂತ್ರಿಯಾಗಿದ್ದಾಗ ಡಾ.ನಂಜುಂಡಪ್ಪ ಅವರ ವರದಿಯನ್ನು ಅನುಷ್ಠಾನಗೊಳಿಸಲು ಶ್ರಮಿಸಿದ್ದೇನೆ. ಈ ಭಾಗದ ರೈತರು ಎದುರಿಸುತ್ತಿರುವ ನೀರಾವರಿ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಸರ್ಕಾರ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಬೇಕು ಎಂದು ಆಗ್ರಹ ಪಡಿಸಿದರು.

ರಾಜ್ಯದಲ್ಲಿ 150ಕ್ಕೂ ಹೆಚ್ಚು ತಾಲ್ಲೂಕುಗಳು ಭೀಕರ ಬರಗಾಲಕ್ಕೆ ತುತ್ತಾಗಿವೆ. ವಿವಿಧ ನದಿಗಳಿಂದ ನೀರು ಹರಿಸಿ ಕೆರೆ ಕಟ್ಟೆಗಳನ್ನು ತುಂಬಿಸಬೇಕು. ರೈತರಿಗೆ ಬೆಂಬಲ ಬೆಲೆ ನೀಡುವುದು, ಎಲ್ಲ ಸರ್ಕಾರಗಳ ಆದ್ಯ ಕರ್ತವ್ಯ. ಇಲ್ಲಿ ಎಲ್ಲರು ಪಕ್ಷ ಭೇದ ಮರೆತು ಕೆಲಸ ಮಾಡಬೇಕೆಂದು ಹೇಳಿದರು.

ಹಿರಿಯ ಸಾಹಿತಿ, ದ.ರಾ. ಬೇಂದ್ರೆ ಅವರ ಮನೆಯನ್ನು ರಾಷ್ಟ್ರೀಯ ಸ್ಮಾರಕ ಮಾಡುವಲ್ಲಿ ಸರ್ಕಾರ ಆದ್ಯತೆ ನೀಡಬೇಕೆಂದು ಒತ್ತಾಯಿಸಿದರು.

ಜಾತ್ರೆಯಂತಾಗಬಾರದು

60 ವರ್ಷಗಳ ನಂತರ ಧಾರವಾಡದಲ್ಲಿ ಸಾಹಿತ್ಯ ಸಮ್ಮೇಳನ ನಡೆದಿದೆ. ಆದರೆ ಕಳೆದೆರಡು ದಿನಗಳಿಂದ ಜಾತ್ರೆಯಂತಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಈ ಸಮ್ಮೇಳನ ಜಾತ್ರೆಯಾಗಬಾರದು. ಪ್ರತಿಯೊಬ್ಬರು ಸಮ್ಮೇಳನ ಮುಗಿಯುವವರೆಗೂ ಸಾಹಿತಿಗಳ ಮಾತುಗಳನ್ನು ಆಲಿಸಬೇಕು. ಇಡೀ ಸಭಾಂಗಣ ತುಂಬಿ ತುಳಕಬೇಕು ಎಂದು ಹೇಳಿದರು.

ಸಮ್ಮೇಳನ ಅಧ್ಯಕ್ಷ ಡಾ.ಚಂದ್ರಶೇಖರ ಕಂಬಾರರ ಭಾಷಣದ ಪ್ರತಿಗಳನ್ನು ಪಡೆದು ಮಕ್ಕಳಿಗೂ ತಿಳಿಸಬೇಕು. ಆ ಮೂಲಕ ಯುವ ಪೀಳಿಗೆಯನ್ನು ಉಜ್ವಲಗೊಳಿಸಬೇಕು ಎಂದು ಹೇಳಿದರು. ಕನ್ನಡ ಭಾಷೆ, ಸಂಸ್ಕೃತಿ, ಬೆಳವಣಿಗೆ ನಾಡಿನ ಅಭಿವೃದ್ಧಿಯ ಸಂಕೇತ. ರಾಜ ಮಹಾರಾಜರುಗಳು ಭಾಷೆಗೆ ವಿಶೇಷ ಒತ್ತು ನೀಡಿದರು. ಅದರಂತೆ ರಾಜಕಾರಣಿಗಳು ಭಾಷೆ ಬೆಳವಣಿಗೆಗೆ ಸಹಕಾರ ನೀಡಬೇಕೆಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಮಾಜಿ ಸಚಿವರಾದ ಡಾ.ಎಚ್.ಸಿ.ಮಹದೇವಪ್ಪ, ಪ್ರೊ.ಐ.ಜಿ. ಸನದ್ಧಿ, ಬಸಂತ ಕುಮಾರ್ ಪಾಟೀಲ, ಪ್ರೊ. ಕಿರಣ್ ಉಪಾಧ್ಯಾಯ, ಡಾ.ನಂದಾ ಎಂ.ಪಾಟೀಲ, ಯು.ಪಿ.ಪುರಾಣಿಕ್, ಟಿ.ತಿಮ್ಮೇಶ್, ಎಂ.ಎ.ಪೊನ್ನಪ್ಪ, ಎಂ.ಕೆ.ಭಾಸ್ಕರ ರಾವ್, ಸೇರಿದಂತೆ 50 ಮಂದಿ ಸಾಧಕರನ್ನು ಸನ್ಮಾನಿಸಿದರು. ಸನ್ಮಾನಿತರ ಪರವಾಗಿ ಮಾತನಾಡಿದ ಮಾಜಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಅವರು ಪ್ರತ್ಯೇಕ ರಾಜ್ಯದ ಕೂಗು ಚರ್ಚೆ ಅನಗತ್ಯ. ಐಕ್ಯತೆಗೆ ಭಂಗಬಾರದಂತೆ ಅಖಂಡ ಕರ್ನಾಟಕವೇ ನಮ್ಮ ಗುರಿಯಾಗಬೇಕು ಎಂದು ಹೇಳಿದರು.

ಕನ್ನಡ ಸಾಹಿತ್ಯ ಪರಿಷತ್ ಪ್ರತಿ ಸಮ್ಮೇಳನಗಳಲ್ಲಿ ಕೈಗೊಳ್ಳುವ ನಿರ್ಣಯಗಳು ಕೇವಲ ನಿರ್ಣಯಗಳಾಗಬಾರದು. ಅವುಗಳನ್ನು ಜಾರಿಗೆ ತರುವಲ್ಲಿ ಕನ್ನಡ ಸಾಹಿತ್ಯ ಪರಿಷತ್ ಮುಂದಾಗಬೇಕು ಎಂದು ಹೇಳಿದರು.

ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮನುಬಳಿಗಾರ್ ಅವರು ಪ್ರಾಸ್ತಾವಿಕ ಭಾಷಣ ಮಾಡಿದರು. ಮಲ್ಲಿಕಾರ್ಜುನ ಯೆಂಡಿಗೇರಿ, ಸ್ವಾಗತಿಸಿದರು.

ಇಂಗ್ಲಿಷ್ ಸಿರಿವಂತರ ಭಾಷೆಯಲ್ಲ

ಕನ್ನಡ ಮತ್ತು ಇಂಗ್ಲಿಷ್ ಮಾಧ್ಯಮ ಕಲಿಕೆಯನ್ನು ಪ್ರಸ್ತಾಪಿಸಿದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಮಾತೃ ಭಾಷೆಯಲ್ಲಿ ಕನ್ನಡವನ್ನು ಕಲಿಯಬೇಕು. ಆದರೆ ಇಂಗ್ಲಿಷ್ ಭಾಷೆಯನ್ನು ಬೇಡ ಅನ್ನಬಾರದು. ವ್ಯವಹಾರಕ್ಕಾಗಿ ಇಂಗ್ಲಿಷ್ ಭಾಷೆ ಬೇಕು. ಇಂಗ್ಲಿಷ್ ಎನ್ನುವುದು ಶ್ರೀಮಂತರ ಸ್ವತ್ತು ಆಗಬಾರದು.

– ಬಿ.ಎಸ್. ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿಗಳು

Leave a Comment