ಅಕ್ಷರ ಜ್ಞಾನದ ಅಕ್ಷಯ

ಮಧುಗಿರಿ, ಫೆ. ೧೧- ಅಕ್ಷರ ಜ್ಞಾನದ ಅಕ್ಷಯವಾಗಿದ್ದು, ಆತ್ಮವಿಶ್ವಾಸ ಹೆಚ್ಚಿಸಿ ನಾಗರಿಕರನ್ನಾಗಿ ರೂಪಿಸುತ್ತದೆ ಎಂದು ಹಿರಿಯ ಸಾಹಿತಿ ಪ್ರೊ.ಮ.ಲ. ನರಸಿಂಹಮೂರ್ತಿ ತಿಳಿಸಿದರು.

ತಾಲ್ಲೂಕಿನ ದೊಡ್ಡೇರಿ ಹೋಬಳಿಯ ಕವಣದಾಲ ಕ್ಲಸ್ಟರ್‍ಗೆ ಸೇರಿದ ಪೂಜಾರಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ಏರ್ಪಡಿಸಿದ್ದ ಶಾಲಾ ವಾರ್ಷಿಕೋತ್ಸವದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಮಕ್ಕಳಿಗೆ ಕೊಡಿಸುವ ಶಿಕ್ಷಣ ರಾಷ್ಟ್ರದ ಅಭಿವೃದ್ಧಿಯ ದಿಕ್ಸೂಚಿ. ನೈತಿಕ ತಳಹದಿಯ ಮೇಲೆ ರೂಪಿತಗೊಳ್ಳುವ ಮಕ್ಕಳು ಇತರರೊಂದಿಗೆ ಬೆರೆತು ಬಾಳುವ ಸಂಸ್ಕೃತಿಯನ್ನು ರೂಢಿಸಿಕೊಳ್ಳುತ್ತಾರೆ. ಶಿಕ್ಷಕರ ಶ್ರಮ, ಪೋಷಕರ ಪ್ರೋತ್ಸಾಹ ಮಕ್ಕಳ ಹಿರಿಮೆ, ಗರಿಮೆಗಳಿಗೆ ಸಾಕ್ಷಿಯಾಗುತ್ತದೆ ಎಂದರು.

ರೋಟರಿ ಮಾಜಿ ಅಧ್ಯಕ್ಷ ಹಾಗೂ ಗುತ್ತಿಗೆದಾರ ಪೂಜಾರಹಳ್ಳಿ ಸಿದ್ದಬಸಪ್ಪ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಈ ಶಾಲೆ ಶತಮಾನದತ್ತ ದಾಪುಗಾಲಿಡುತ್ತಿದ್ದು, ಇಲ್ಲಿಗೆ 95 ವರ್ಷಗಳನ್ನು ದಾಟಿದೆ. ಇಲ್ಲಿ ಕಲಿತವರು ದೇಶ-ವಿದೇಶಗಳಲ್ಲಿ ಉನ್ನತ ಹುದ್ದೆಯಲ್ಲಿದ್ದು, ಕಾರ್ಯನಿರ್ವಹಿಸುತ್ತಿದ್ದಾರೆ. ಕಾನ್ವೆಂಟ್ ಶಿಕ್ಷಣಕ್ಕೆ ಮಾರು ಹೋದ ತಂದೆ-ತಾಯಿಗಳು ಮಕ್ಕಳನ್ನು ಸರ್ಕಾರಿ ಶಾಲೆಗೆ ಕಳುಹಿಸದಿರುವುದರಿಂದ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗತ್ತಿದೆ ಎಂದು ವಿಷಾದಿಸಿದರು.

ಮುಖ್ಯ ಶಿಕ್ಷಕ ಕುಮಾರ್ ಮಾತನಾಡಿ, ಶಾಲೆಯ ಉಳಿವಿಗಾಗಿ ಹೆಚ್ಚು ಹೆಚ್ಚು ಮಕ್ಕಳನ್ನು ಶಾಲೆಗೆ ಸೇರಿಸುವ ಮೂಲಕ ನಮ್ಮೂರ ಶಾಲೆ ಎಂಬ ಅಭಿಮಾನವನ್ನು ಬೆಳೆಸಿಕೊಂಡು ಶಾಲೆಯನ್ನು ಅಭಿವೃದ್ಧಿಗೊಳಿಸಬೇಕು ಎಂದು ಮನವಿ ಮಾಡಿದರು.

ಸಮಾರಂಭದಲ್ಲಿ ಬಿಆರ್‍ಸಿ ಎಚ್.ಆರ್. ಆನಂದಕುಮಾರ್, ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಸೂರ್ಯಪ್ರಕಾಶ್, ಶಿಕ್ಷಕರಾದ ಬಸವರಾಜು, ಪುಟ್ಟಸ್ವಾಮಿ,

ಶಿಕ್ಷಕಿ ವಿಜಯಮ್ಮ, ಪದ್ಮ, ಕ್ಲಸ್ಟರ್ ಸಿಆರ್‍ಪಿ ರೇವಣ್ಣ, ವೆಂಕಟೇಶಪ್ಪ, ರಂಗಧಾಮಯ್ಯ, ಯಶೋಧಮ್ಮ, ಮಂಜುನಾಥ್, ಚಂದ್ರಮೌಳಿ, ಲಕ್ಷ್ಮೀನಾರಾಯಣ, ನರಸೇಗೌಡ ಮತ್ತಿತರರು ಉಪಸ್ಥಿತರಿದ್ದರು.

Leave a Comment