ಅಕ್ರಮ ಮರಳು ದಂಧೆ : ಪೊಲೀಸರಿಂದ ಮಾಸಿಕ ಹಫ್ತಾ ನಿಗದಿ

* ಯರಗೇರಾ ಠಾಣಾ ವ್ಯಾಪ್ತಿಯಲ್ಲಿ ಮಾಮೂಲಿಗಾಗಿ ಟ್ರ್ಯಾಕ್ಟರ್ ಮಾಲೀಕರ ಮೇಲೆ ಹಲ್ಲೆ
ರಾಯಚೂರು.ಅ.19- ಅಕ್ರಮ ಮರಳು ಸಾಗಾಣಿಕೆ ನಿಯಂತ್ರಿಸಬೇಕಾದ ಪೊಲೀಸರೇ ಲಂಚಕ್ಕಾಗಿ ಅಕ್ರಮ ಮರಳು ದಂಧೆಗೆ ಪ್ರೋತ್ಸಾಹಿಸುವ ಘಟನೆಯೊಂದು ಬಹಿರಂಗಗೊಂಡಿದೆ.
ಮರಳು ಸಾಗಿಸುವ ಟ್ರ್ಯಾಕ್ಟರ್ ಮತ್ತಿತರ ವಾಹನಗಳಿಂದ ಮಾಸಿಕ ಇಂತಿಷ್ಟು ಹಫ್ತಾ ನಿಗದಿ ಪಡಿಸಿ, ಹಣ ಕೊಟ್ಟರೇ, ಮರಳು ಸಾಗಾಣಿಕೆ ಇಲ್ಲದಿದ್ದರೇ, ದೈಹಿಕ ಹಲ್ಲೆ ಎನ್ನುವ ಖಾಸಗಿ ಕಾನೂನೊಂದನ್ನು ಪೊಲೀಸ್ ರೂಪಿಸಿಕೊಂಡಿದ್ದಾರೆ ಎನ್ನುವುದಕ್ಕೆ ನಿನ್ನೆ ಯರಗೇರಾ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ ಸಾಕ್ಷಿಯಾಗಿದೆ. ಮರಳು ಸಾಗಿಸುತ್ತಿದ್ದ ಬಾಯಿದೊಡ್ಡಿ ಗ್ರಾಮದ ಭೀಮಾಶಂಕರ್ ಎಂಬುವವರ ಮೇಲೆ ಪೊಲೀಸರು ಹಲ್ಲೆ ಮಾಡಿದ ಘಟನೆ ಮರಳು ಹಫ್ತಾ ವ್ಯವಹಾರ ಬಹಿರಂಗಗೊಳ್ಳುವಂತೆ ಮಾಡಿದೆ.
ಭೀಮಾಶಂಕರ್ ಟ್ರ್ಯಾಕ್ಟರವೊಂದರಲ್ಲಿ ಮರಳು ತುಂಬಿಕೊಂಡು ಹೋಗುವ ದಾರಿಯಲ್ಲಿ ಅಡ್ಡಗಟ್ಟಿದ ಯರಗೇರಾ ಠಾಣಾ ಪೇದೆಗಳು ಆವಾಚ್ಯ ಶಬ್ಧಗಳಿಂದ ನಿಂದಿಸಿ, ಬಲವಂತವಾಗಿ ಟ್ರ್ಯಾಕ್ಟರನಿಂದ ಕೆಳಗಿಳಿದು 40 ಸಾವಿರ ರೂ. ಹಣ ನೀಡುವಂತೆ ಒತ್ತಾಯಿಸಿದರು. ಹಣ ನೀಡದ ಕಾರಣಕ್ಕೆ ಭೀಮಾಶಂಕರ ಅವರ ಮೇಲೆ ಯರ್ರಾಬಿರ್ರಿ ಹಲ್ಲೆ ಮಾಡಿದ್ದಾರೆ. ಪೊಲೀಸರ ಹಲ್ಲೆಯಲ್ಲಿ ತೀವ್ರ ಗಾಯಗೊಂಡ ಭೀಮಾಶಂಕರ ಅವರು ರಿಮ್ಸ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದರು.
ಈ ಘಟನೆ ಕೃಷ್ಣಾ ಮತ್ತು ತುಂಗಭದ್ರಾ ನದಿ ಭಾಗದ ಪ್ರದೇಶಗಳಲ್ಲಿ ಅಕ್ರಮ ಮರಳು ದಂಧೆಗೆ ಪೊಲೀಸರು ಮಾಸಿಕವಾಗಿ ಇಂತಿಷ್ಟು ಹಫ್ತಾ ಪಡೆಯುತ್ತಿದ್ದಾರೆ ಎನ್ನುವುದು ಸ್ಪಷ್ಟಗೊಂಡಿದೆ. ಏನೆಲ್ಲಾ ಕಟ್ಟುನಿಟ್ಟಿನ ಕ್ರಮ ಜಾರಿಗೊಳಿಸಿದರೂ, ಚೆಕ್ ಪೋಸ್ಟ್‌ಗಳಲ್ಲಿ ಪರಿಶೀಲಿಸಬೇಕಾದ ಪೊಲೀಸ್ ಅಧಿಕಾರಿಗಳು ಸಮರ್ಪಕವಾಗಿ ಕಾರ್ಯ ನಿರ್ವಹಿಸದ ಕಾರಣ ಅಕ್ರಮ ಮರಳು ಭಾರೀ ಪ್ರಮಾಣದಲ್ಲಿ ಜಿಲ್ಲೆಯಿಂದ ಹೊರಗೆ ಹೋಗುತ್ತದೆ.
ಮರಳು ಸಾಗಾಣಿಕೆ ಅಕ್ರಮದಲ್ಲಿ ಕೇವಲ ಗಣಿ ಮತ್ತು ಭೂ ವಿಜ್ಞಾನ ಅಧಿಕಾರಿಗಳಿಗೆ ಮಾತ್ರವಲ್ಲದೇ, ಪೊಲೀಸರ ಪಾಲು ಗಣನೀಯವಾಗಿದೆ ಎನ್ನುವುದಕ್ಕೆ ನಿನ್ನೆಯ ಘಟನೆ ತಾಜಾ ನಿದರ್ಶವಾಗಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಈ ಬಗ್ಗೆ ಯಾವ ಕ್ರಮ ಕೈಗೊಳ್ಳುತ್ತಾರೆ ಎನ್ನುವುದರ ಮೇಲೆ ಅಕ್ರಮ ಮರಳು ದಂಧೆ ಅವಲಂಬಿತವಾಗಿದೆ. ಸ್ವತಃ ಹಲ್ಲೆಗೊಳಗಾದ ಭೀಮಾಶಂಕರ್, ಪೊಲೀಸ್ ಪೇದೆಗಳಾದ ಸಂತೋಷ ಮತ್ತು ಹನುಮಂತ್ರಾಯ ಇವರು ತಮ್ಮ ಮೇಲೆ ಹಲ್ಲೆ ಮಾಡಿದ್ದಾರೆಂದು ಹೆಸರು ಬಹಿರಂಗ ಪಡಿಸಿದ್ದಾರೆ.
ಗಡಿ ಭಾಗದ ಠಾಣೆಗಳಲ್ಲಿ ನಿರಂತರವಾಗಿ ಈ ಹಫ್ತಾ ವಸೂಲಿ ಪ್ರಕ್ರಿಯೆ ನಡೆದಿದ್ದರೂ, ಮೇಲಾಧಿಕಾರಿಗಳು ಇದನ್ನು ತಡೆಯಲು ಪರ್ಯಾಯ ಕ್ರಮ ಕೈಗೊಳ್ಳದಿರುವುದರಿಂದ ಪೊಲೀಸ್ ಇಲಾಖೆಯ ಎಲ್ಲರನ್ನೂ ಶಂಕಿಸುವಂತೆ ಮಾಡಿದೆ. ಅಕ್ರಮ ಮರಳ ಸಾಗಾಣಿಕೆಗೆ ಸಂಬಂಧಿಸಿ ಈ ಹಿಂದೆ ಜಿಲ್ಲೆಯಲ್ಲಿ ಅನೇಕ ವಿವಾದಗಳು ತಲೆಯೆತ್ತಿವೆ. ಪ್ರತಿ ಪ್ರಕರಣದಲ್ಲೂ ಪೊಲೀಸರು ಶಾಮೀಲಾಗಿರುವುದು ಸ್ಪಷ್ಟಗೊಂಡಿದೆ.
ಅಕ್ರಮ ತಡೆಗೆ ಕೇವಲ ಚೆಕ್‌ಪೋಸ್ಟ್ ಮಾಡಿದರೇ, ಸಾಲದು. ಅಲ್ಲಿಯ ಅಧಿಕಾರಿಗಳು ಪ್ರಾಮಾಣಿಕವಾಗಿ ಅಕ್ರಮ ಮರಳು ತಡೆಗೆ ಕ್ರಮ ಕೈಗೊಳ್ಳದಿದ್ದರೇ, ಒಂದೆಡೆ ಜಿಲ್ಲೆಯ ನೈಸರ್ಗಿಕ ಸಂಪನ್ಮೂಲ ಖಾಲಿಯಾದರೇ, ಮತ್ತೊಂದೆಡೆ ಸರ್ಕಾರಕ್ಕೆ ಇದರಿಂದ ಯಾವುದೇ ಆದಾಯ ಬಾರದೇ, ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಖಜಾನೆ ತುಂಬಲು ನೆರವಾಗುವುದು. ಈ ಹಿನ್ನೆಲೆಯಲ್ಲಿ ಇಂತಹ ಘಟನೆಗಳು ಮತ್ತೇ ಮರುಕಳುಹಿಸದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವ ಜವಾಬ್ದಾರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಮೇಲಿದೆ.

Leave a Comment