ಅಕ್ರಮ ನೆಲೆಸಿರುವ ವಿದೇಶಿಯರ ಪತ್ತೆಗೆ ಸೂಚನೆ

(ನಮ್ಮ ಪ್ರತಿನಿಧಿಯಿಂದ)

ಬೆಂಗಳೂರು, ಸೆ. ೧೨- ನಗರದಲ್ಲಿ ಹೆಚ್ಚುತ್ತಿರುವ ವಿದೇಶಿಗರ ಹಾವಳಿಯನ್ನು ಹತ್ತಿಕ್ಕಲು ಕೂಡಲೇ ವೀಸಾ ಅವಧಿ ಮುಗಿದಿರುವ ವಿದೇಶಿಗರನ್ನು ಪತ್ತೆ ಹಚ್ಚಿ ಅವರ ದೇಶಕ್ಕೆ ಕಳುಹಿಸಲು ಕ್ರಮ ಕೈಗೊಳ್ಳುವಂತೆ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಅವರು ನಗರ ಪೊಲೀಸ್ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ನಗರದ ಈಶಾನ್ಯ ವೈಟ್‌ಫೀಲ್ಡ್ ಪೂರ್ವ ಹಾಗೂ ಆಗ್ನೇಯ ವಲಯಗಳಲ್ಲಿ ಅಕ್ರಮವಾಗಿ ನೆಲೆಸಿರುವ ಆಫ್ರಿಕ ಇನ್ನಿತರ ವಿದೇಶಿಗರು ಹಾವಳಿ ನಡೆಸುತ್ತ ಸ್ಥಳೀಯರ ಶಾಂತಿಗೆ ಭಂಗ ತರುವುದನ್ನು ಗಂಭೀರವಾಗಿ ಪರಿಗಣಿಸುವಂತೆ ಸೂಚನೆ ನೀಡಿದರು.

ಕ್ರಿಕೆಟ್ ನೋಡಲು ಬಂದು ವೀಸಾ ಅವಧಿ ಮುಗಿದಿದ್ದರೂ ಹಲವು ವಿದೇಶಿಗರು ನಗರದಲ್ಲಿ ನೆಲೆಸಿದ್ದಾರೆ. ಇವರ ಜತೆಗೆ ವಿದ್ಯಾರ್ಥಿ ಹಾಗೂ ವ್ಯಾಪಾರಿ ವೀಸಾದಲ್ಲಿ ಬಂದಿರುವ ಕೆಲ ಆಫ್ರಿಕನ್ನರು ಮಾದಕ ವಸ್ತುಗಳ ಮಾರಾಟ ದಂಧೆಯಲ್ಲಿ ತೊಡಗಿರುವ ಮಾಹಿತಿಯಾಧರಿಸಿ ಕಠಿಣ ಕ್ರಮಕೈಗೊಳ್ಳುವಂತೆ ಸಲಹೆ ಮಾಡಿದರು.

ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯ ಸಹಾಯಕ ಪೊಲೀಸ್ ಆಯುಕ್ತರ ಹಂತದ ಮೇಲ್ಪಟ್ಟ ಅಧಿಕಾರಿಗಳ ಜತೆ ಅಪರಾಧ ಪರಿಶೀಲನೆ ಸಭೆ ನಡೆಸಿದ ಗೃಹಖಾತೆಯನ್ನು ಹೊಂದಿರುವ ಪರಮೇಶ್ವರ್ ಅವರು, ವೀಸಾ ಅವಧಿ ಮುಗಿದ ವಿದೇಶಿಗರನ್ನು ಪತ್ತೆ ಹಚ್ಚಿ ಸ್ವದೇಶಕ್ಕೆ ಕಳುಹಿಸುವಲ್ಲಿ ನಿರ್ಲಕ್ಷ್ಯವಹಿಸಿದರೆ ಅದಕ್ಕೆ ಆ ವ್ಯಾಪ್ತಿಯ ಅಧಿಕಾರಿಗಳನ್ನೇ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.

ರಸ್ತೆಯಲ್ಲಿರುವ ಸೂಚನೆ

ಸಂಚಾರಿ ಪೊಲೀಸರು ಮತ್ತು ಅಧಿಕಾರಿಗಳಿಗೆ ಕಚೇರಿಯಲ್ಲಿ ಹೆಚ್ಚಿನ ಕೆಲಸವಿಲ್ಲದಿರುವುದರಿಂದ ಎಲ್ಲ ಅಧಿಕಾರಿಗಳು ಕಡ್ಡಾಯವಾಗಿ ಹೆಚ್ಚಿನ ಸಮಯವನ್ನು ರಸ್ತೆಯಲ್ಲೇ ಕಳೆದು ಸಂಚಾರ ದಟ್ಟಣೆ ಸುಗಮಗೊಳಿಸಲು ಮುಂದಾಗಬೇಕು.

ಪೇದೆಗಳನ್ನು ಮಾತ್ರ ರಸ್ತೆಯಲ್ಲಿ ಬಿಟ್ಟು ಅಧಿಕಾರಿಗಳು ಕಚೇರಿಯಲ್ಲಿ ಕಾಲ ಕಳೆಯುವುದನ್ನು ತಾವು ಸಹಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದರು.

ಯಾವುದೇ ರಸ್ತೆಯಲ್ಲಿ ಅಪರಾಧ ಕೃತ್ಯ ನಡೆದಾಗ ಕಾನೂನು ಸುವ್ಯವಸ್ಥೆಯ ಅಧಿಕಾರಿಗಳು ಸ್ಥಳಕ್ಕೆ ತೆರಳುವ ಮೊದಲೇ ಸಂಚಾರ ಪೊಲೀಸರಿಗೆ ಅದರ ಮಾಹಿತಿ ದೊರೆಯಬೇಕು. ಅಧಿಕಾರಿಗಳು ರಸ್ತೆಯಲ್ಲಿದ್ದರೆ ಎಷ್ಟೋ ಅಪರಾಧ ಕೃತ್ಯಗಳು ಕಡಿಮೆಯಾಗಲಿದೆ. ಇದನ್ನು ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಬೇಕು ಎಂದು ಕಿವಿಮಾತು ಹೇಳಿದರು.

ಎಎಸ್‌ಐಗೂ ಪಿಸ್ತೂಲು

ನಗರದಲ್ಲಿ ಗಸ್ತು ವ್ಯವಸ್ಥೆಯನ್ನು ಸಮರ್ಪಕವಾಗಿ ಜಾರಿಗೊಳಿಸಬೇಕು. ಗಸ್ತು ವ್ಯವಸ್ಥೆ ಸಮರ್ಪಕವಾಗಿದ್ದರೆ ಅಪಘಾತ ಕೃತ್ಯಗಳು ಅರ್ಧದಷ್ಟು ಕಡಿಮೆಯಾಗುತ್ತವೆ.ಗಸ್ತು ವ್ಯವಸ್ಥೆಯನ್ನು ಪರಿಶೀಲಿಸಲು ಅಧಿಕಾರಿಗಳು ಆಗಾಗ್ಗೆ ಭೇಟಿ ನೀಡಬೇಕು. ಇದನ್ನು ಪರಿಶೀಲಿಸಲು ತಾವು ರಾತ್ರಿ-ಹಗಲೆನ್ನದೆ ಠಾಣೆಗಳಿಗೆ ದಿಢೀರ್ ಭೇಟಿ ನೀಡುವುದಾಗಿ ಎಚ್ಚರಿಕೆ ನೀಡಿದರು.

ಕಾನೂನು ಸುವ್ಯವಸ್ಥೆ ಕಾಪಾಡಿ ಅಪರಾಧಿಗಳಿಂದ ಸ್ವಯಂ ರಕ್ಷಣೆ ಪಡೆಯಲು ಸಹಾಯಕ ಪೊಲೀಸ್ ಇನ್ಸ್‌ಪೆಕ್ಟರ್‌ಗಳಿಗೆ (ಎಎಸ್‌ಐ) ಪಿಸ್ತೂಲು ನೀಡಲು ಕ್ರಮಕೈಗೊಳ್ಳಲಾಗುವುದು. ಇದರ ಸಾಧಕ-ಬಾಧಕಗಳನ್ನುಪರಿಶೀಲಿಸಿ ವರದಿ ನೀಡುವಂತೆ ನಗರ ಪೊಲೀಸ್ ಆಯುಕ್ತರಿಗೆ ಸೂಚನೆ ನೀಡಿದರು.

ಶಾಲಾ-ಕಾಲೇಜುಗಳಿಗೆ ಭೇಟಿ

ನಗರದ ಎಲ್ಲ ಡಿಸಿಪಿ ಹಾಗೂ ಎಸಿಪಿಗಳು ತಮ್ಮ ವ್ಯಾಪ್ತಿಯ ಶಾಲಾ-ಕಾಲೇಜುಗಳಿಗೆ ಆಗಾಗ್ಗೆ ಭೇಟಿ ನೀಡಿ ಅಲ್ಲಿನ ಸುರಕ್ಷತೆಯ ಬಗ್ಗೆ ಗಮನ ಹರಿಸಬೇಕು.. ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ ಅಲ್ಲಿನ ಸುರಕ್ಷತೆಯ ಬಗ್ಗೆ ಗಮನ ಹರಿಸಬೇಕು ಎಂದರು.

ವೃತ್ತಿಪರ ಹಾಗೂ ಪದವಿಕಾಲೇಜುಗಳಲ್ಲಿ ಮಾದಕ ವಸ್ತುಗಳ ಮಾರಾಟ ವ್ಯಸನಿಗಳ ಬಗ್ಗೆ ನಿಗಾವಹಿಸಬೇಕು. ಮಾದರ ವಸ್ತುಗಳ ಮಾರಾಟ ಜಾಲವನ್ನು ಮಾದಕ ವ್ಯಸನಿಗಳಿಂದಲೆ ಪತ್ತೆ ಹಚ್ಚಿ ಕಠಿಣ ಕ್ರಮಕೈಗೊಳ್ಳುವಂತೆ ಪರಮೇಶ್ವರ್ ಸೂಚನೆ ನೀಡಿದರು.

ಸಭೆಯಲ್ಲಿ ನಗರ ಪೊಲೀಸ್ ಆಯುಕ್ತ ಸುನಿಲ್ ಕುಮಾರ್, ಹೆಚ್ಚುವರಿ ಪೊಲೀಸ್ ಆಯುಕ್ತರಾದ ಸೀಮಂತ್ ಕುಮಾರ್ ಸಿಂಗ್, ಡಿ.ಕೆ ಸಿಂಗ್, ಹಿತೇಂದ್ರ ಸೇರಿ ನಗರದ ಎಲ್ಲ ಡಿಸಿಪಿಗಳು, ಎಸಿಪಿಗಳು ಪಾಲ್ಗೊಂಡಿದ್ದರು.

Leave a Comment