ಅಕ್ರಮವಾಗಿ ನೆಲೆಸಿದ್ದ 12 ಮಂದಿ ಆಫ್ರಿಕನ್‌ರ ಸೆರೆ

ಬೆಂಗಳೂರು, ಜೂ ೧೬- ವೀಸಾ ಅವಧಿ ಮುಗಿದರೂ ನಗರದಲ್ಲಿ ಅಕ್ರಮವಾಗಿ ನೆಲೆಸಿದ್ದ ಆಫ್ರಿಕಾ ದೇಶಗಳ 12 ಮಂದಿ ಪ್ರಜೆಗಳನ್ನು ಈಶಾನ್ಯ ವಿಭಾಗದ ಪೊಲೀಸರು ಬಂಧಿಸಿದ್ದಾರೆ.
ಈಶಾನ್ಯ ವಿಭಾಗದ ಯಲಹಂಕ ಹಾಗೂ ಯಲಹಂಕ ಉಪನಗರದ ಪೊಲೀಸರು ಎಫ್‌.ಆರ್.ಆರ್.ಓ ಅಧಿಕಾರಿಗಳ ಜೊತೆ ಜಂಟಿ ಕಾರ್ಯಾಚರಣೆ ನಡೆಸಿ ಯಲಹಂಕ ಸುತ್ತಮುತ್ತ ಅಕ್ರಮವಾಗಿ ನೆಲೆಸಿದ್ದ 12 ಮಂದಿ ಆಫ್ರಿಕಾ ಪ್ರಜೆಗಳನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ.
ಆರೋಪಿಗಳು ವಿದ್ಯಾರ್ಥಿ ವ್ಯಾಪಾರಿ ಹಾಗೂ ಪ್ರವಾಸಿ ವೀಸಾದಲ್ಲಿ ನಗರಕ್ಕೆ ಬಂದು ವೀಸಾ ಅವಧಿ ಮುಗಿದ್ದರೂ ತಮ್ಮ ದೇಶಗಳಿಗೆ ಹಿಂತಿರುಗದೆ ವೀಸಾ ಅವಧಿಯನ್ನು ವಿಸ್ತರಿಸಿಕೊಳ್ಳದೆ ಬಾಡಿಗೆ ಮನೆ ಮಾಡಿಕೊಂಡು ಅಕ್ರಮವಾಗಿ ನೆಲೆಸಿದ್ದರು.
ತಮ್ಮ ದೇಶದಲ್ಲಿ ಕಡು ಬಡತನವಿರುವುದರಿಂದ ಆರೋಪಿಗಳು ವೀಸಾ ಅವಧಿ ಮುಗಿದ್ದರೂ ಉತ್ತಮ ಜೀವನ ನಡೆಸಲೂ ನಗರದಲ್ಲಿ ನೆಲೆಸಿರುವುದು ಪತ್ತೆಯಾಗಿದೆ. ಬಂಧಿತ ಯಾವೊಬ್ಬ ಪ್ರಜೆಕೂಡ ಅಪರಾಧ ಹಿನ್ನೆಲೆಯಲ್ಲಿ ಭಾಗಿಯಾಗಿರಲಿಲ್ಲ. ಅವರ ಬಳಿ ಗಾಂಜಾ ಇನ್ನಿತರ ಮಾದಕ ವಸ್ತುಗಳು ಪತ್ತೆಯಾಗಿಲ್ಲ ಎಂದು ಡಿಸಿಪಿ ಕಲಾ ಕೃಷ್ಣಸ್ವಾಮಿ ಅವರು ತಿಳಿಸಿದ್ದಾರೆ.
ಆರೋಪಿಗಳ ವಿರುದ್ಧ ಪಾಸ್ ಪೋರ್ಟ್, ವಿದೇಶಿ ಕಾಯ್ದೆ ಹಾಗೂ ಇನ್ನಿತರ ಸೆಕ್ಷನ್‌ಗಳ ಅನ್ವಯ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಎಸಿಪಿ ಶ್ರೀನಿವಾಸ್ ಅವರ ನೇತೃತ್ವದಲ್ಲಿ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

Leave a Comment