ಅಕ್ಕಿರಾಂಪುರದಲ್ಲಿ ಗುಡಿಸಲಿಗೆ ಬೆಂಕಿ: ಕಾರು-ಬೈಕ್ ಭಸ್ಮ

ಕೊರಟಗೆರೆ, ಜೂ. ೨೧- ತಾಲ್ಲೂಕಿನ ಅಕ್ಕಿರಾಂಪುರದಲ್ಲಿ ಗುಡಿಸಲುಗಳಿಗೆ ಬೆಂಕಿ ಬಿದ್ದ ಪರಿಣಾಮ ಗುಡಿಸಲುಗಳು ಸಂಪೂರ್ಣ ಸುಟ್ಟು ಭಸ್ಮವಾಗುವ ಜತೆಗೆ ಗುಡಿಸಲುಗಳ ಸುತ್ತಮುತ್ತ ಬೆಂಕಿ ಆವರಿಸಿದ್ದರಿಂದ ಒಂದು ಕಾರು ಮತ್ತು ದ್ವಿಚಕ್ರ ವಾಹನ ಬೆಂಕಿಗಾಹುತಿಯಾಗಿರುವ ಘಟನೆ ಇಂದು ಮುಂಜಾನೆ ನಡೆದಿದೆ.

ಅಕ್ಕಿರಾಂಪುರದ ಗ್ರಾಮದಲ್ಲಿ ಬೆಳಗಿನ ಜಾವ 5 ಗಂಟೆ ಸಮಯದಲ್ಲಿ ಇದ್ದಕ್ಕಿದ್ದಂತೆ ಗುಡಿಸಲುಗಳು ಬೆಂಕಿಯ ಕೆನ್ನಾಲಿಗೆಯಿಂದ ದಗದಗನೆ ಹೊತ್ತಿ ಉರಿದಿವೆ. ಗುಡಿಸಲಿಗೆ ಬಿದ್ದ ಬೆಂಕಿ ಸುತ್ತಮುತ್ತ ಆವರಿಸಿದ್ದರಿಂದ ಸಮೀಪದಲ್ಲೇ ನಿಲ್ಲಿಸಲಾಗಿದ್ದ ಚಾಂದ್‌ಪಾಷ ಎಂಬುವರಿಗೆ ಸೇರಿದ ಒಂದು ಕಾರು ಮತ್ತು ದ್ವಿಚಕ್ರ ವಾಹನ ಸಹ ಸುಟ್ಟು ಕರಕಲಾಗಿವೆ.

ಯಾರೋ ಕಿಡಿಗೇಡಿಗಳು ಗುಡಿಸಲಿಗೆ ಬೆಂಕಿ ಹಚ್ಚಿ ಪರಾರಿಯಾಗಿರಬಹುದು ಎಂದು ಶಂಕಿಸಲಾಗಿದೆ.
ಗುಡಿಸಲಿಗೆ ಬೆಂಕಿ ಬಿದ್ದ ಸಂದರ್ಭದಲ್ಲಿ ಯಾರೂ ಅದರೊಳಗೆ ಇಲ್ಲದಿದ್ದರಿಂದ ಸಂಭವಿಸಬಹುದಾಗಿದ್ದ ಭಾರೀ ಅನಾಹುತ ತಪ್ಪಿದೆ. ಆದರೆ ಗುಡಿಸಲಿನಲ್ಲಿದ್ದ ದವಸ ಧಾನ್ಯ ಸೇರಿದಂತೆ ಇನ್ನಿತರೆ ದಿನ ಬಳಕೆ ವಸ್ತುಗಳು ಸುಟ್ಟು ಬೂದಿಯಾಗಿವೆ. ಇದರಿಂದ ಲಕ್ಷಾಂತರ ರೂ. ನಷ್ಟ ಸಂಭವಿಸಿದೆ.

ಘಟನೆಯ ಸುದ್ದಿ ತಿಳಿದ ಕೂಡಲೇ ಕೊರಟಗೆರೆ ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ದಗದಗನೆ ಉರಿಯುತ್ತಿದ್ದ ಬೆಂಕಿಯನ್ನು ನಂದಿಸಿದರಾದರೂ ಅಷ್ಟರಲ್ಲಾಗಲೇ ಗುಡಿಸಲು ಮತ್ತು ಕಾರು, ಬೈಕು ಸಂಪೂರ್ಣ ಸುಟ್ಟು ಹೋಗಿದ್ದವು.

ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕ್ರಮ ಜರುಗಿಸುತ್ತಿದ್ದಾರೆ.

Leave a Comment