ಅಂಬೇಡ್ಕರ್ ಕೇಂದ್ರ ಮೋದಿ ಸಮರ್ಪಣೆ

ನವದೆಹಲಿ, ಡಿ.೭: ರಾಜಧಾನಿಯಲ್ಲಿ ನಡೆದ ಕಾರ್ಯಕ್ರಮದಲ್ಲಿಂದು ಡಾ.ಬಿ.ಆರ್. ಅಂಬೇಡ್ಕರ್ ಕೇಂದ್ರವನ್ನು ಪ್ರಧಾನಿ ನರೇಂದ್ರ ಮೋದಿ ದೇಶಕ್ಕೆ ಸಮರ್ಪಿಸಿದರು.
ಈ ಸಂಸ್ಥೆಗೆ ಪ್ರಧಾನಿ ಮೋದಿ ಅವರು ೨೦೧೫ ಎಪ್ರಿಲ್‌ನಲ್ಲಿ ಶಂಕುಸ್ಥಾಪನೆ ನೆರವೇರಿಸಿದ್ದರು.

ಬಳಿಕ ಮಾತನಾಡಿದ ಅವರು, ಡಾ.ಅಂಬೇಡ್ಕರ್ ಅವರ ಚಿಂತನೆ ಮತ್ತು ದೂರದೃಷ್ಟಿಯನ್ನು ಪ್ರಸರಿಸಲು ಈ ಕೇಂದ್ರ ಸಹಾಯಕವಾಗಲಿದೆ. ಸಾಮಾಜಿಕ ಮತ್ತು ಆರ್ಥಿಕ ಸಮಸ್ಯೆಗಳ ಪರಿಹಾರಕ್ಕೆ ಸಂಶೋಧನೆ ನಡೆಸುವಲ್ಲಿಯೂ ಸಂಸ್ಥೆ ಮಹತ್ವದ ಪಾತ್ರವಹಿಸಲಿದೆ ಎಂದು ಹೇಳಿದರು.

ವಿವಿಧ ಸಂದರ್ಭಗಳಲ್ಲಿ ಹಲವು ನಾಯಕರ ಮಾರ್ಗದರ್ಶನ ಮತ್ತು ಸಲಹೆಗಳು ದೇಶದ ದಿಕ್ಕನ್ನು ಬದಲಿಸಿದೆ. ಬಾಬಾ ಸಾಹೇಬ್ ಅವರ ಕೊಡುಗೆಯಿಂದ ದೇಶ ಅತಿ ಎತ್ತರಕ್ಕೆ ಬೆಳೆದಿದೆ. ಅವರ ಚಿಂತನೆ ಮತ್ತು ಆಲೋಚನೆಗಳನ್ನು ಇನ್ನಷ್ಟು ಜನರಿಗೆ ಅದರಲ್ಲೂ ವಿಶೇಷವಾಗಿ ಯುವ ಸಮುದಾಯಕ್ಕೆ ತಲುಪಿಸಲು ಕೇಂದ್ರ ಸರ್ಕಾರ ಪ್ರಯತ್ನಿಸುತ್ತಿದೆ.

ಅಂಬೇಡ್ಕರ್ ಅವರ ಜೀವನಕ್ಕೆ ಸಂಬಂಧಿಸಿದ ಹಲವು ಸ್ಥಳಗಳನ್ನು ಯಾತ್ರಾ ಸ್ಥಳವಾಗಿ ಅಭಿವೃದ್ಧಿಪಡಿಸಲಾಗಿದೆ. ದೆಹಲಿಯ ಅಲಿಪುರ್, ಮಧ್ಯಪ್ರದೇಶದ ಮೊಹವ್, ಮುಂಬೈಯ ಇಂದುಮಿಲ್, ನಾಗ್ಪುರದ ದೀಕ್ಷಾ ಭೂಮಿ, ಲಂಡನ್‌ನಲ್ಲಿದ್ದ ಅವರ ಮನೆಗಳನ್ನು ಅಭಿವೃದ್ಧಿಪಡಿಸಿ ಪ್ರವಾಸಿ ತಾಣವಾಗಿ ಮಾಡಲಾಗಿದೆ. ಈ ಪಂಚಪೀಠಗಳು ಇಂದು ಯುವ ಸಮೂಹಕ್ಕೆ ಸ್ಫೂರ್ತಿಯ ತಾಣಗಳಾಗಲಿದೆ. ಅಂಬೇಡ್ಕರ್ ಹೆಸರಲ್ಲಿ ಭೀಮ್ ಆಪ್ ಬಿಡುಗಡೆ ಮಾಡುವ ಮೂಲಕ ಕೇಂದ್ರ ಸರ್ಕಾರ ಅಂಬೇಡ್ಕರ್ ಅವರಿಗೆ ಗೌರವ ಸಲ್ಲಿಸಿದೆ ಎಂದು ಪ್ರಧಾನಿ ಮೋದಿ ಸ್ಮರಿಸಿದರು.

Leave a Comment