ಅಂಧ ಗಾಯಕಿಯರ ಜಗ್ಗೇಶ್ ಪರಿಮಳ ನಿಲಯದ ಗೃಹ ಪ್ರವೇಶ

ಮಧುಗಿರಿ, ಮಾ. ೧೧- ತಮ್ಮ ಸುಮಧುರ ಕಂಠದಿಂದಲೇ ಖ್ಯಾತಿಗಳಿಸಿ ಜೀ ಕನ್ನಡ ಸರಿಗಮಪ ಕಾರ್ಯಕ್ರಮಕ್ಕೆ ಆಯ್ಕೆಯಾದ ತಾಲ್ಲೂಕಿನ ಅಂಧ ಗಾನ ಕೋಗಿಲೆಗಳಿಗೆ ಚೆಂದದ ಮನೆಯ ಭಾಗ್ಯ ಒದಗಿ ಬಂದಿದೆ.
ಮಧುಗಿರಿ ಸಿರಾ ರಸ್ತೆಯಲ್ಲಿರುವ ಕಸಬಾ ವ್ಯಾಪ್ತಿಯ ಡಿ.ವಿ.ಹಳ್ಳಿ ಗ್ರಾಮದ ಗಾನ ಕೋಗಿಲೆಗಳಾದ ಮಂಜಮ್ಮ ಮತ್ತು ರತ್ನಮ್ಮ ಸಹೋದರಿಯರಿಗೆ ಜೀ ಕನ್ನಡ ಸರಿಗಮಪ ವೇದಿಕೆಯಲ್ಲಿ ನೀಡಿದ ವಾಗ್ದಾನದಂತೆ ನವರಸ ನಾಯಕ ಜಗ್ಗೇಶ್ ನಿರ್ಮಿಸಿಕೊಟ್ಟಿರುವ ಮನೆಯ ಗೃಹ ಪ್ರವೇಶ ಕಾರ್ಯಕ್ರಮ ಮಾ. ೧೨ ರಂದು ನಡೆಯಲಿದೆ.
ಜಗ್ಗೇಶ್ ದಂಪತಿ ಆಗಮಿಸಿ ಗೃಹ ಪ್ರವೇಶ ನೆರವೇರಿಸಲಿದ್ದಾರೆ. ಮನೆ ನಿರ್ಮಾಣದ ಜವಾಬ್ದಾರಿಯನ್ನು ಕೊರಟಗೆರೆ ತಾಲ್ಲೂಕಿನ ಜಗ್ಗೇಶ್ ಅಭಿಮಾನಿ ಬಳಗ ಮತ್ತು ಫ್ರೆಂಡ್ಸ್ ಗ್ರೂಪ್ ವಹಿಸಿಕೊಂಡಿದ್ದು, ಅಂಧ ಗಾಯಕಿಯರ ಹಳೆಯ ಮನೆಯನ್ನು ಕೆಡವಿ, ೯ ಚದರ ವಿಸ್ತೀರ್ಣದಲ್ಲಿ ಸುಮಾರು ೮ ಲಕ್ಷ ರೂ.ಗಳ ವೆಚ್ಚದಲ್ಲಿ ನೂತನ ಮನೆಯನ್ನು ನಿರ್ಮಿಸಲಾಗಿದೆ.
ಗ್ರಾಮದ ಮೂವರು ಸಹೋದರಿಯರಾದ ಗೌರಮ್ಮ, ಮಂಜಮ್ಮ ಮತ್ತು ರತ್ನಮ್ಮ ಇವರ ಬಾಲ್ಯದಿಂದಲೇ ಕಡು ಬಡತನದಿಂದ ಬೆಳೆದವರಾಗಿದ್ದು, ಯಾವುದೇ ಶಾಲೆಯ ಮೆಟ್ಟಿಲು ಹತ್ತಿದವರಲ್ಲ. ಊರಿನಲ್ಲಿ ಸಮಾರಂಭಗಳಲ್ಲಿ ಹಾಕುತ್ತಿದ್ದ ಧ್ವನಿವರ್ಧಕಗಳ ಮೂಲಕ ಹಾಡುವುದನ್ನು ಕಲಿತ ಇವರು ಸುಮಾರು ೧೫ ವರ್ಷಗಳಿಂದಲೂ ಮಧುಗಿರಿ ದಂಡಿನ ಮಾರಮ್ಮನ ದೇವಸ್ಥಾನದ ಮುಂಭಾಗ ನಿರಂತರವಾಗಿ ದಂಡಿನ ಮಾರಮ್ಮ ತಾಯಿಯ ಬಗ್ಗೆ ನಿರಂತರವಾಗಿ ಹಾಡುಗಳನ್ನು ಹಾಡಿ ಭಕ್ತಾದಿಗಳು ನೀಡುವ ಕಾಣಿಕೆಯಲ್ಲಿ ಜೀವನ ನಿರ್ವಹಣೆ ಮಾಡುತ್ತಿದ್ದರು.
ಬಡ ಕುಟುಂಬ
ಸಿದ್ದಮ್ಮ-ಅಶ್ವತ್ಥಪ್ಪ ದಂಪತಿಗಳಿಗೆ ೪ ಹೆಣ್ಣು ಮತ್ತು ಒಬ್ಬ ಗಂಡು ಮಗನಿದ್ದನು. ಇವರು ಹುಟ್ಟಿದ ನಂತರ ತಾಯಿ ಸಿದ್ದಮ್ಮ ೨೦ ವರ್ಷಗಳ ಹಿಂದೆಯೇ ಮೃತಪಟ್ಟಿದ್ದು, ೪ ಜನ ಹೆಣ್ಣು ಮಕ್ಕಳಲ್ಲಿ ಗೌರಮ್ಮ, ಮಂಜಮ್ಮ, ರತ್ನಮ್ಮ ಹುಟ್ಟಿನಿಂದಲೇ ಅಂಧರಾಗಿದ್ದು, ಮತ್ತೊಬ್ಬರಿಗೆ ಯಾವುದೇ ತೊಂದರೆಯಿಲ್ಲ. ಇನ್ನು ಇದ್ದ ಒಬ್ಬ ಮಗನೂ ಖಾಯಿಲೆಯಿಂದ ಮೃತಪಟ್ಟಿದ್ದು, ಚಿಕ್ಕಂದಿನಿಂದಲೇ ಸಹೋದರಿಯರು ಅಜ್ಜಿ ತಿಮ್ಮಕ್ಕನ ಆರೈಕೆಯಲ್ಲೇ ಬೆಳೆದಿದ್ದಾರೆ. ತಂದೆ ಮತ್ತು ಅಜ್ಜಿಗೆ ದುಡಿಯಲು ಶಕ್ತಿಯಿಲ್ಲದ ಹಿನ್ನೆಲೆಯಲ್ಲಿ ವಿಧಿಯಿಲ್ಲದೇ ಕುಟುಂಬದ ನಿರ್ವಹಣೆಯ ಹೊಣೆ ಅಂಧ ಸಹೋದರಿಯರ ಹೆಗಲೇರುತ್ತದೆ. ಈ ಸಂದರ್ಭದಲ್ಲಿ ಚಿಕ್ಕಂದಿನಲ್ಲಿ ಕಲಿತ ಹಾಡುಗಾರಿಕೆ ನೆರವಿಗೆ ಬಂದಿದ್ದು, ಅದರಿಂದಲೇ ಬದುಕಿನ ಬಂಡಿ ಸಾಗಿಸುತ್ತಾ ಬಂದಿದ್ದಾರೆ.
ಇವರ ಗಾಯನವನ್ನು ಮೆಚ್ಚಿ ತಾಲ್ಲೂಕು ಆಡಳಿತ ಈಗಾಗಲೇ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದ್ದು, ಕೊರಟಗೆರೆಯ ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮೀಜಿಯವರು ಸಿದ್ದರಬೆಟ್ಟದಲ್ಲಿ ಪ್ರತಿ ಹುಣ್ಣಿಮೆಯಂದು ನಡೆಸುವ ಕಾರ್ಯಕ್ರಮದಲ್ಲಿ ಗೌರವಿಸಿದ್ದಾರೆ.
ನವರಸ ನಾಯಕ ಜಗ್ಗೇಶ್ ರವರ ಸೂಚನೆಯಂತೆ ಕೊರಟಗೆರೆಯ ಜಗ್ಗೇಶ್ ಅಭಿಮಾನಿ ಬಳಗ ಮತ್ತು ಫ್ರೆಂಡ್ಸ್ ಗ್ರೂಪ್ ವತಿಯಿಂದ ಡಿವಿ.ಹಳ್ಳಿ ಗ್ರಾಮದಲ್ಲಿ ಅಂಧ ಗಾನ ಕೋಗಿಲೆಗಳಿಗೆ ಸುಮಾರು ೮ ಲಕ್ಷ ವೆಚ್ಚದಲ್ಲಿ ಮನೆಯನ್ನು ನಿರ್ಮಿಸಲಾಗಿದ್ದು, ಮಾ. ೧೨ ರಂದು ಜಗ್ಗೇಶ್ ದಂಪತಿಗಳು ಗೃಹಪ್ರವೇಶ ನೆರವೇರಿಸಲಿದ್ದಾರೆ ಎಂದು ಫ್ರೆಂಡ್ಸ್ ಗ್ರೂಪ್ ಅಧ್ಯಕ್ಷ ಕೆ.ಎಸ್. ರವಿಕುಮಾರ್ ತಿಳಿಸಿದ್ದಾರೆ.

 

Leave a Comment