ಅಂತಿಮ ಸಮರ: ಭೂಮಿಕೆ ಸಿದ್ಧ : ಪ್ರಧಾನಿ ನರೇಂದ್ರಮೋದಿ ಸೇರಿ ಹಲವು ಮುತ್ಸದ್ಧಿ ನಾಯಕರ ರಾಜಕೀಯ ಭವಿಷ್ಯ ನಿರ್ಧಾರ

ನವದೆಹಲಿ, ಮೇ ೧೬- ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ದೇಶದ 543 ಸದಸ್ಯ ಬಲದ ಲೋಕಸಭೆಗೆ ನಡೆಯುತ್ತಿರುವ ಚುನಾವಣೆಯ ಅಂತಿಮ ಹಾಗೂ ಕೊನೆಯ ಚರಣದ ಮತದಾನ ಮೇ 19 ರಂದು ನಡೆಯಲಿದ್ದು, ಇದಕ್ಕಾಗಿ ಭೂಮಿಕೆ ಸಿದ್ಧಗೊಂಡಿದೆ.

  •  ಮೇ 19ಕ್ಕೆ ಲೋಕಸಭಾ ಚುನಾವಣೆಯ ಅಂತಿಮ ಹಂತದ ಮತದಾನ.
  •  7 ರಾಜ್ಯಗಳು ಮತ್ತು 1 ಕೇಂದ್ರಾಡಳಿತ ಪ್ರದೇಶದ 59 ಕ್ಷೇತ್ರಗಳಿಗೆ ಚುನಾವಣೆ.
  •  ಪ್ರಧಾನಿ ಪ್ರತಿನಿಧಿಸುವ ಉತ್ತರ ಪ್ರದೇಶದ ವಾರಾಣಸಿ ಕ್ಷೇತ್ರಕ್ಕೂ ಈ ಹಂತದಲ್ಲಿ ಮತದಾನ.
  •  ವಿವಿಧ ರಾಜಕೀಯ ಪಕ್ಷಗಳ ಘಟಾನುಘಟಿ ನಾಯಕರಿಂದ ಮತದಾರರ ಓಲೈಕೆ ಮುಂದುವರಿಕೆ.
  •  ಹಿಂಸಾಚಾರದ ಹಿನ್ನೆಲೆಯಲ್ಲಿ ಪಶ್ಚಿಮ ಬಂಗಾಳದಲ್ಲಿ ಬಹಿರಂಗ ಪ್ರಚಾರ ಇಂದು ರಾತ್ರಿಗೆ ಅಂತ್ಯ.
  •  ಮೇ 23 ರಂದು ಎಲ್ಲ 7 ಹಂತಗಳ ಮತಗಳ ಎಣಿಕೆ.

ಈ ಹಂತದ ಮತದಾನಕ್ಕೆ ನಾಳೆ ಸಂಜೆಗೆ ಬಹಿರಂಗ ಪ್ರಚಾರಕ್ಕೆ ತೆರೆ ಬೀಳಲಿದೆ.

ಪ್ರಧಾನಮಂತ್ರಿ ನರೇಂದ್ರಮೋದಿ ಪ್ರತಿನಿಧಿಸಿರುವ ಉತ್ತರ ಪ್ರದೇಶದ ವಾರಾಣಸಿ ಸೇರಿದಂತೆ 7 ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ 59 ಲೋಕಸಭಾ ಕ್ಷೇತ್ರಗಳಿಗೆ ಬರುವ ಭಾನುವಾರ 7ನೇ ಹಾಗೂ ಅಂತಿಮ ಹಂತದ ಚುನಾವಣೆ ನಡೆಯಲಿದ್ದು, ವಿವಿಧ ರಾಜಕೀಯ ಪಕ್ಷಗಳ ಘಟಾನುಘಟಿ ನಾಯಕರ ಪ್ರಚಾರ ತಾರಕಕ್ಕೇರಿದೆ.

ಉತ್ತರ ಪ್ರದೇಶದ 13, ಪಂಜಾಬ್‌ನ ಎಲ್ಲ 13, ಪಶ್ಚಿಮ ಬಂಗಾಳದ 9, ಬಿಹಾರ ಮತ್ತು ಮಧ್ಯಪ್ರದೇಶದ ತಲಾ 8, ಹಿಮಾಚಲ ಪ್ರದೇಶದ ಎಲ್ಲ 4, ಜಾರ್ಖಂಡ್‌ನ 3 ಮತ್ತು ಚಂಡೀಘಡದ ಏಕೈಕ ಕ್ಷೇತ್ರಕ್ಕೆ ಮೇ 19ರಂದು ಚುನಾವಣೆ ನಡೆಯಲಿದೆ. ಈ ಹಂತದ ಮತದಾನಕ್ಕೆ ಚುನಾವಣಾ ಆಯೋಗ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ.

ಪ್ರಚಾರದ ಅವಧಿ ಮೊಟಕು
ಈ ನಡುವೆ ಪಶ್ಚಿಮಬಂಗಾಳದ ಕೊಲ್ಕತ್ತದಲ್ಲಿ ನಡೆದ ಹಿಂಸಾಚಾರ ಹಾಗೂ ಬಿಜೆಪಿ ಅಧ್ಯಕ್ಷ ಅಮಿತ್ ಷಾ ಅವರ ರೋಡ್ ಶೋ ಮೇಲೆ ನಡೆದ ಕಲ್ಲು ತೂರಾಟ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿರುವ ಚುನಾವಣಾ ಆಯೋಗ, ಈ ರಾಜ್ಯದಲ್ಲಿ ನಡೆಯಲಿರುವ 9 ಲೋಕಸಭಾ ಕ್ಷೇತ್ರಗಳ ಚುನಾವಣಾ ಪ್ರಚಾರದ ಅವಧಿಯನ್ನು ದಿನದ ಮಟ್ಟಿಗೆ ಮೊಟಕುಗೊಳಿಸಿದೆ. ಈ ಕ್ಷೇತ್ರಗಳಲ್ಲಿ ಬಹಿರಂಗ ಪ್ರಚಾರಕ್ಕೆ ಇಂದು ರಾತ್ರಿ 10 ಗಂಟೆವರೆಗೆ ಕಾಲಾವಕಾಶವನ್ನು ಆಯೋಗ ನಿಗದಿಪಡಿಸಿದೆ.

ಹಿಂಸಾತ್ಮಕ ಘಟನೆಗಳ ಹಿನ್ನೆಲೆಯಲ್ಲಿ ಪಶ್ಚಿಮ ಬಂಗಾಳದ ಗೃಹ ಇಲಾಖೆಯ ಪ್ರಧಾನ ಕಾರ್ಯದರ್ಶಿ ಹಾಗೂ ಸಿಐಡಿಯ ಹೆಚ್ಚುವರಿ ಮಹಾ ನಿರ್ದೇಶಕರನ್ನು ಎತ್ತಂಗಡಿ ಮಾಡಲಾಗಿದೆ.
ಮತದಾರರನ್ನು ಓಲೈಸಿಕೊಳ್ಳಲು ಪ್ರಧಾನಿ ನರೇಂದ್ರಮೋದಿ, ಬಿಜೆಪಿ ಅಧ್ಯಕ್ಷ ಅಮಿತ್ ಷಾ, ವಿದೇಶಾಂಗ ಸಚಿವ ಸುಷ್ಮಾಸ್ವರಾಜ್, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿಆದಿತ್ಯನಾಥ್, ಕಾಂಗ್ರೆಸ್ ಅಧ್ಯಕ್ಷ ರಾಹುಲ್‌ಗಾಂಧಿ, ಅವರ ಸಹೋದರಿ, ಪಕ್ಷದ ಮಹಾಪ್ರಧಾನ ಕಾರ್ಯದರ್ಶಿ ಪ್ರಿಯಾಂಕಗಾಂಧಿ ವಾದ್ರಾ ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಇಂದು ವಿವಿಧೆಡೆ ಬಹಿರಂಗ ಸಭೆ, ಱ್ಯಾಲಿ, ರೋಡ್ ಶೋಗಳಲ್ಲಿ ಪಾಲ್ಗೊಂಡಿದ್ದರು.

ಇದುವರೆಗೂ ಆರು ಹಂತದ ಲೋಕಸಭಾ ಚುನಾವಣೆ ಪ್ರಕ್ರಿಯೆ ಪೂರ್ಣಗೊಂಡಿದ್ದು, ಮೇ 19 ರಂದು ನಡೆಯಲಿರುವ 59 ಕ್ಷೇತ್ರಗಳ ಚುನಾವಣೆಯೊಂದಿಗೆ ಈ ಪ್ರಕ್ರಿಯೆ ಪೂರ್ಣಗೊಳ್ಳಲಿದೆ. ಮೇ 23ಕ್ಕೆ ಈ ಎಲ್ಲ ಹಂತಗಳ ಮತ ಎಣಿಕೆ ನಡೆಯಲಿದೆ.

 

Leave a Comment