ಅಂತಾರಾಷ್ಟ್ರೀಯ ಮಟ್ಟದ ವಿದ್ಯಾರ್ಥಿಗಳ ಸಂಸ್ಕೃತಿ ಸಮ್ಮಿಲನ

 

ಬೆಂಗಳೂರು, ಫೆ ೧೬- ಹಾರ್ವರ್ಡ್ ಶಿಕ್ಷಣ ಸಂಸ್ಥೆಯಿಂದ ವಿವಿಧ ದೇಶಗಳ ವಿದ್ಯಾರ್ಥಿಗಳ ಸಂಸ್ಕೃತಿ, ಸಂಸ್ಕಾರ, ಸಾಂಸ್ಕೃತಿಕ ಪರಂಪರೆ ವಿನಿಮಯ ಮಾಡಿಕೊಳ್ಳುವ ಸಮ್ಮಿಲನ ಉದ್ದೇಶದ ಹಾರ್ವರ್ಡ್ ಕಲ್ಚರಲ್ ಹೆರಿಟೇಜ್ -೨೦೨೦” ಅಂತಾರಾಷ್ಟ್ರೀಯ ಕಾರ್ಯಕ್ರಮ ಆಯೋಜನೆಗೊಂಡಿತ್ತು.

ಹಾರ್ವರ್ಡ್ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಆಸ್ಟ್ರೇಲಿಯಾ, ಇಂಗ್ಲೆಂಡ್, ನೇಪಾಳ, ಭೂತಾನ್, ಸ್ವಿಜ್ಜರ್ ಲ್ಯಾಂಡ್, ಶ್ರೀಲಂಕಾದೇಶಗಳ ೧೨ಕ್ಕೂ ಹೆಚ್ಚು ಶಾಲೆಗಳ ವಿದ್ಯಾರ್ಥಿಗಳು ಪಾಲ್ಗೊಂಡು ತಮ್ಮ ದೇಶದಲ್ಲಿರುವ ಶಿಕ್ಷಣ ವ್ಯವಸ್ಥೆ, ಮಕ್ಕಳ ಹಕ್ಕುಗಳು, ಕಲೆ, ಸಂಸ್ಕೃತಿ, ಮತ್ತಿತರ ವಿಷಯಗಳ ಬಗ್ಗೆ ಬೆಳಕು ಚೆಲ್ಲಿದರು. ತಮ್ಮ ದೇಶಗಳ ಸಂಸ್ಕೃತಿ ಬಿಂಬಿಸುವ ನವ, ನವೀನ, ವೈವಿಧ್ಯಮಯ ಕಾರ್ಯಕ್ರಮಗಳು ಸಂಸ್ಕೃತಿ ವಿನಿಮಯದ ಪ್ರತೀಕದಂತಿತ್ತು.

ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಗೋಪಾಲಯ್ಯ ಅವರು ಮಾತನಾಡಿ, ವಿದ್ಯಾರ್ಥಿಗಳ ಯಶಸ್ಸಿನ ರಥಕ್ಕೆ ಶಿಕ್ಷಕರು ಸಾರಥಿಯಾಗಿದ್ದು ಸಾರಥಿ ಸೂಚಿಸುವ ದಿಕ್ಕನತ್ತ ವಿದ್ಯಾರ್ಥಿಗಳು ಸಾಗಿ ಭವಿಷ್ಯ ರೂಪಿಸಿಕೊಳ್ಳಬೇಕು. ವ್ಯವಸ್ಥೆಯಲ್ಲಿ ಶಿಕ್ಷಕರೇ ಇಲ್ಲದಿದ್ದರೆ ಭವಿಷ್ಯದ ದಿಕ್ಕು ತೋರುವ ದಿಕ್ಸೂಚಿಯೇ ಇಲ್ಲದಂತಾಗುತ್ತಿತ್ತು. ಗುರು ಸರಿಯಿಲ್ಲದಿದ್ದರೆ ಸಾಮಾಜಿಕ ವ್ಯವಸ್ಥೆ ಹಾಳಾಗುತ್ತದೆ. ನಿಜವಾದ ಗುರು ಇರುವ ಕಡೆ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದು ಪ್ರತಿಪಾದಿಸಿದರು.

ಹಾರ್ವರ್ಡ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ. ಬಿ. ಗಂಗಣ್ಣ ಮಾತನಾಡಿ, ಬೇರೆ ದೇಶಗಳ ಸಂಸ್ಕೃತಿ, ಪರಂಪರೆ, ಕಲಿಕಾ ವಿಧಾನ ಮತ್ತಿತರ ವಿಚಾರಗಳನ್ನು ತಿಳಿಯಲು ಇಂತಹ ಕಾರ್ಯಕ್ರಮ ಸಹಕಾರಿಯಾಗಿದೆ. ಇದರಿಂದ ಮಕ್ಕಳ ಕಲಿಕಾ ಮಟ್ಟ ಕೂಡ ಹೆಚ್ಚಾಗುವುದಲ್ಲದೇ ಶಿಕ್ಷಣದ ಗುಣಮಟ್ಟ ವೃದ್ಧಿಸಲು ಸಾಧ್ಯ ಎಂದರು.

Leave a Comment