ಅಂತರ್ ಜಿಲ್ಲಾ ಕಳ್ಳನ ಬಂಧನ-17.20 ಲಕ್ಷರೂ ಸ್ವತ್ತು ವಶ

ದಾವಣಗೆರೆ, ಫೆ. 6 -ಅಂತರ್ ಜಿಲ್ಲಾ ಕಳ್ಳನನ್ನು ಬಂಧಿಸಿರುವ ಪೊಲೀಸರು ಸುಮಾರು 17.20 ಲಕ್ಷ ರೂ ಮೌಲ್ಯದ ಸ್ವತ್ತುಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಆರ್.ಚೇತನ್ ಮಾಹಿತಿ ನೀಡಿದರು.
ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳ ಕಚೇರಿಯಲ್ಲಿಂದು ಕರೆದಿದ್ದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಚನ್ನಗಿರಿ ತಾಲ್ಲೂಕಿನ ಗಾರೆ ಕೆಲಸ ಮಾಡುವ ಅಫ್ರೋಜ್ ಅಹ್ಮದ್ (35) ಬಂಧಿತ ಆರೋಪಿ. ಈತ ಸಂತೆಬೆನ್ನೂರು, ಮಾಯಕೊಂಡ, ಹೊಸದುರ್ಗ, ಶಿವಮೊಗ್ಗ, ಚಿಕ್ಕಜಾಜೂರು, ಹೊಳಲ್ಕೆರೆ, ಹೊಳೆಹೊನ್ನೂರು, ನ್ಯಾಮತಿ ಸೇರಿದಂತೆ ವಿವಿಧೆಡೆ ಬೈಕ್ ನಲ್ಲಿ ಸುತ್ತಾಡುತ್ತಾ ಬೀಗ ಹಾಕಿರುವ ಮನೆಗಳನ್ನು ಗುರುತಿಸಿ ಹೊಂಚು ಹಾಕಿ ಕಳ್ಳತನ ಮಾಡುತ್ತಿದ್ದ. ಇತ್ತೀಚಿಗೆ ಬಾಡಾ ಕ್ರಾಸ್ ಬಳಿಯ ಗಣೇಶ ದೇವಸ್ಥಾನದ ಹತ್ತಿರ ಅನುಮಾನಸ್ಪದವಾಗಿ ತಿರುಗಾಡುತ್ತಿದ್ದ ವೇಳೆ ಅನುಮಾನಗೊಂಡ ಪೊಲೀಸರು ಆತನನ್ನು ವಿಚಾರಣೆಗೊಳಪಡಿಸಿದಾಗ ಕಳ್ಳತನ ಮಾಡುತ್ತಿರುವ ಬಗ್ಗೆ ಒಪ್ಪಿಕೊಂಡಿದ್ದಾನೆ. ಮನೆಗಳ ಬೀಗವನ್ನು ಕಬ್ಬಿಣದ ರಾಡ್ ನಿಂದ ಮುರಿದು ಒಳನುಗ್ಗಿ, ಬಂಗಾರ, ಬೆಳ್ಳಿ ಆಭರಣಗಳು,ಹಣ ಕಳ್ಳತನ ಮಾಡುತ್ತಿದ್ದ ಸುಮಾರು 13 ಪ್ರಕರಣಗಳಿಗೆ ಸಂಬಂಧಿಸಿದಂತೆ ಈತನಿಂದ 519 ಗ್ರಾಂ ಬಂಗಾರ, 2800 ಗ್ರಾಂ ಬೆಳ್ಳಿ ಆಭರಣ ಹಾಗೂ ಕೃತ್ಯಕ್ಕೆ ಬಳಸುತ್ತಿದ್ದ ಎರಡು ಕಬ್ಬಿಣದ ರಾಡ್ ಗಳು.ಟಾರ್ಚ್ ಹಾಗೂ ಬೈಕ್ ವಶಪಡಿಸಿಕೊಳ್ಳಲಾಗಿದೆ. ಆರೋಪಿ ಈ ಹಿಂದೆಯೂ ಮಲೇಬೆನ್ನೂರು, ಹೊನ್ನಾಳಿ, ರಾಣೇಬೆನ್ನೂರು, ಹೊಳಲ್ಕೆರೆ, ಅಜ್ಜಂಪುರ, ಭದ್ರಾವತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳವು ಮಾಡಿ ಸುಮಾರು 32 ಪ್ರಕರಣಗಳಿಗೆ ಸಂಬಂಧಿಸಿದಂತೆ ಬಂಧಿತನಾಗಿದ್ದ ಎಂದು ತಿಳಿಸಿದರು.ಈ ಪ್ರಕರಣ ಪತ್ತೆ ಮಾಡುವಲ್ಲಿ ಯಶಸ್ವಿಯಾದ ಸಿಬ್ಬಂದಿಗೆ ನಗದು ಬಹುಮಾನ ಘೋಷಿಸಲಾಗಿದೆ.
ಸುದ್ದಿಗೋಷ್ಟಿಯಲ್ಲಿ ಎ ಎಸ್ ಪಿ ಟಿ.ಜೆ.ಉದೇಶ್, ಡಿಸಿಐಬಿ ಪಿಐ ಎಸ್.ಲಕ್ಷ್ಮಣನಾಯ್ಕ, ಹೆಚ್.ಗುರುಬಸವರಾಜ್, ಮಜೀದ್ ಮತ್ತಿತರರಿದ್ದರು.
 ರೂಪಾನಾಯ್ಕ ಪ್ರಕರಣ-ತನಿಖೆ ನಡೆಯುತ್ತಿದೆ
ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ರೂಪಾನಾಯ್ಕ ಅವರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪವಿದೆ. ಪ್ರಕರಣ ದಾಖಲಾಗಿದೆ. ಈ ಪ್ರಕರಣ ಕುರಿತಂತೆ ಅವರನ್ನು ವಿಚಾರಣೆ ನಡೆಸಲಾಗುವುದು. ಈ ಬಗ್ಗೆ ತನಿಖೆ ಮುಂದುವರೆದಿದೆ. ಸಂತ್ರಸ್ತೆಗೆ ಭ್ರಷ್ಟಾಚಾರ ವಿರೋಧಿ ವೇದಿಕೆ ಅಧ್ಯಕ್ಷ ಗುರುಪಾದಯ್ಯಮಠದ್ ಹಾಗೂ ಅವರ ಪತ್ನಿ ಮಂಜುಳಾ ಬೆದರಿಕೆ ಹಾಕಿ ಹಲ್ಲೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ಈ ಬಗ್ಗೆಯೂ ವಿಚಾರಣೆ ನಡೆಯುತ್ತಿದೆ.ಈಗಾಗಲೇ ಪೇದೆ ಮಂಜುಳಾ ಅವರನ್ನು ಹೊನ್ನಾಳಿಯಿಂದ ಮಲೇಬೆನ್ನೂರಿಗೆ ವರ್ಗಾವಣೆ ಮಾಡಲಾಗಿದೆ.
ಅರ್ಧ ಹೆಲ್ಮೇಟ್ ಧರಿಸಿದರೆ ದಂಡ
ಸಾರ್ವಜನಿಕರ ಸುರಕ್ಷತೆಯ ದೃಷ್ಟಿಯಿಂದ ಪೂರ್ಣಪ್ರಮಾಣದ ಹೆಲ್ಮೇಟ್ ಧರಿಸುವುದನ್ನು ಕಡ್ಡಾಯಗೊಳಿಸಲಾಗುತ್ತಿದೆ. ಅರ್ಧ ಹೆಲ್ಮೇಟ್ ಧರಿಸಿದರೆ ದಂಡ ವಿಧಿಸಲಾಗುವುದು. ಸಾರ್ವಜನಿಕರು ಸಹ ಸ್ವಯಂ ಪ್ರೇರಿತರಾಗಿ ಪೂರ್ಣ ಪ್ರಮಾಣದ ಹೆಲ್ಮೇಟ್ ಧರಿಸಬೇಕು. ಪಿಬಿ ರಸ್ತೆಯಲ್ಲಿ ವಾಹನ ಸಂಚಾರ ಹೆಚ್ಚಾಗುತ್ತಿದೆ. ಇದರಿಂದಾಗಿ ಪಾದಚಾರಿಗಳಿಗೆ ತೊಂದರೆಯಾಗುತ್ತಿದೆ. ಫುಟ್ ಪಾತ್ ನಿರ್ಮಾಣ ಮಾಡುವಂತೆ ಈಗಾಗಲೇ ಸ್ಮಾರ್ಟ್ ಸಿಟಿ ಅಧಿಕಾರಿಗಳಿಗೆ ಇತ್ತೀಚಿಗೆ ನಡೆದ ಸಭೆಯಲ್ಲಿ ತಿಳಿಸಲಾಗಿದೆ.

Leave a Comment