ಅಂತರ್ಜಲ ವೃದ್ಧಿಗೆ ಕ್ರಮ: ಸಚಿವ ಈಶ್ವರಪ್ಪ

ತುಮಕೂರು, ಮೇ ೨೯- ರಾಜ್ಯದಲ್ಲಿ ಅಂತರ್ಜಲ ಮಟ್ಟ ದಿನೇ ದಿನೇ ಕುಸಿಯುತ್ತಿರುವುದನ್ನು ಗಮನಿಸಿ ಮುಂದಿನ 3 ವರ್ಷಗಳಲ್ಲಿ ಸಾಕಷ್ಟು ಅಂತರ್ಜಲ ಪ್ರಮಾಣ ಹೆಚ್ಚಿಸಲು “ಅಂತರ್ಜಲ ಚೇತನ” ಕಾರ್ಯಕ್ರಮದ ಮೂಲಕ ಅಗತ್ಯ ಕ್ರಮ ಕೈಗೊಳ್ಳುತ್ತಿರುವುದಾಗಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಇಂದಿಲ್ಲಿ ತಿಳಿಸಿದರು.

ರಾಜ್ಯ ಮತ್ತು ದೇಶದಲ್ಲಿ ಅಂತರ್ಜಲ ಮಟ್ಟ ಜಾಸ್ತಿ ಮಾಡುವ ಉದ್ದೇಶದಿಂದ ಗ್ರಾಮೀಣಾಭಿವೃದ್ಧಿ ಇಲಾಖೆ ವತಿಯಿಂದ ಅಂತರ್ಜಲ ಚೇತನ ಕಾರ್ಯಕ್ರಮ ಜಾರಿಗೆ ತರಲಾಗಿದೆ ಎಂದು ಅವರು ಹೇಳಿದರು.

ನಗರದ ಕುಂಚಿಟಿಗರ ಸಮುದಾಯ ಭವನದಲ್ಲಿ ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯ ಕಾಮಗಾರಿಗಳನ್ನು ಸಮ್ಮಿಳಿತಗೊಳಿಸಿ, ಜಲಮೂಲಗಳ ಪುನಶ್ಚೇತನಗೊಳಿಸಲು ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ಸಹಭಾಗಿತ್ವದಲ್ಲಿ ಅನುಷ್ಠಾನಗೊಳಿಸುತ್ತಿರುವ “ಅಂತರ್ಜಲ ಚೇತನ” ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕರ್ನಾಟಕ ರಾಜ್ಯ ಮತ್ತು ದೇಶದಲ್ಲಿ ಅಂತರ್ಜಲ ವೃದ್ಧಿಗಾಗಿ ಅಂತರ್ಜಲ ಚೇತನ ಕಾರ್ಯಕ್ರಮವನ್ನು ಸರ್ಕಾರ ಹಮ್ಮಿಕೊಂಡಿದ್ದು, ಕನಿಷ್ಠ 3 ವರ್ಷದಲ್ಲಿ 30 ವರ್ಷಗಳಿಗಾಗುವಷ್ಟು ಅಂತರ್ಜಲ ವೃದ್ಧಿ ಮಾಡಲು ಸರ್ಕಾರ ತೀರ್ಮಾನಿಸಿದೆ ಎಂದರು.

ದೇಶದಲ್ಲಿ ಮಳೆ ಪ್ರಮಾಣ ಕಡಿಮೆಯಾಗಿಲ್ಲ. ಕಳೆದ 30-40 ವರ್ಷಗಳ ಹಿಂದೆ ಎಷ್ಟು ಮಳೆ ಆಗುತ್ತಿತ್ತೋ ಈಗಲೂ ಅಷ್ಟೇ ಪ್ರಮಾಣದಲ್ಲಿ ಮಳೆಯಾಗುತ್ತಿದೆ. ಮಳೆ ನೀರು ಸಮುದ್ರಕ್ಕೆ ಹರಿದು ಹೋಗುತ್ತದೆ. ಇಲ್ಲದಿದ್ದರೆ ಆವಿಯಾಗುತ್ತಿದೆ. ಹಾಗಾಗಿ ಮಳೆ ನೀರನ್ನು ಭೂಮಿಯಲ್ಲಿ ಸಮರ್ಪಕವಾಗಿ ಇಂಗಿಸುವಲ್ಲಿ ನಾವು ವಿಫಲರಾಗಿದ್ದೇವೆ ಎಂದರು.

ಈಗಾಗಲೇ ರಾಜ್ಯದ ಶಿಮೊಗ್ಗ, ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದ್ದು, ಈಗ ತುಮಕೂರು ಜಿಲ್ಲೆಯಲ್ಲೂ ಅಂತರ್ಜಲ ಚೇತನಕ್ಕೆ ಚಾಲನೆ ನೀಡಲಾಗಿದೆ. ಈ ಜಿಲ್ಲೆಯಲ್ಲೂ ಕೆರೆ ಹೂಳೆತ್ತುವ ಕಾಮಗಾರಿ ಸೇರಿದಂತೆ ವಿವಿಧ  ಕಾಮಗಾರಿಗಳನ್ನು ಕೈಗೊಂಡು ಅಂತರ್ಜಲವನ್ನು ಅತಿ ಹೆಚ್ಚಿನ ಪ್ರಮಾಣದಲ್ಲಿ ಜಾಸ್ತಿ ಮಾಡಲು ಪ್ರಯತ್ನಿಸಲಾಗುವುದು ಎಂದರು.

ಭೂಮಿಯಲ್ಲಿ ನೀರು ಇದೆಯೋ, ಇಲ್ಲವೋ ಗೊತ್ತಿಲ್ಲ. ಆದರೂ ನಾವು ದಿನೇ ದಿನೇ ಆಕ್ರಮಣ ಮಾಡುತ್ತಲೇ ಇದ್ದೇವೆ. 1800 ಅಡಿಗಳಾದರೂ ಕೊರೆದು ನೀರು ತೆಗೆದು ಭೂಮಿಯನ್ನು ಬರಡು ಮಾಡುತ್ತಿದ್ದೇವೆ. ಆದರೆ ಅಂತರ್ಜಲ ವೃದ್ಧಿಸುವ ಪ್ರಯತ್ನ ಮಾತ್ರ ಮಾಡುತ್ತಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.

ಮಹಾತ್ಮಗಾಂಧಿ ಉದ್ಯೋಗ ಖಾತ್ರಿ ಯೋಜನೆಗಾಗಿ ಕೇಂದ್ರ ಸರ್ಕಾರ ಬಜೆಟ್‌ನಲ್ಲಿ 60 ಸಾವಿರ ಕೋಟಿ ರೂ. ಮೀಸಲಿಟ್ಟಿತ್ತು. ಮತ್ತೆ ಈಗ 20 ಲಕ್ಷ ಕೋಟಿ ರೂ. ವಿಶೇಷ ಪ್ಯಾಕೇಜ್‌ನಲ್ಲೂ 40 ಸಾವಿರ ಕೋಟಿ ರೂ. ನೀಡಿದೆ ಎಂದ ಅವರು, ಈ ಯೋಜನೆಯಡಿ ಇದುವರೆಗೂ ಮಾನವ ದಿನವನ್ನು 100 ದಿನ ಕೊಡುತ್ತಿದ್ದೇವು. ಈಗ ಇನ್ನು 50 ದಿನ ಜಾಸ್ತಿ ಮಾಡಿ ಜನರಿಗೆ ಕೆಲಸ ನೀಡಲಾಗುವುದು ಎಂದರು.

ನರೇಗಾಡಿ 9 ಲಕ್ಷದ 30 ಸಾವಿರಕ್ಕೂ ಹೆಚ್ಚು ಜನ ನರೇಗಾದಡಿ ಕೆಲಸ ಮಾಡುತ್ತಿದ್ದಾರೆ. ಎಲ್ಲ ಜಿಲ್ಲೆಗಳಲ್ಲೂ ಕೂಡಾ ನರೇಗಾ ಕಾಮಗಾರಿಗೆ ಹೆಚ್ಚು ಜನರನ್ನು ಬಳಸಿಕೊಳ್ಳುವಂತೆ ಅವರು ಕರೆ ನೀಡಿದರು.

ಸಮಾರಂಭದಲ್ಲಿ ಜಿಲ್ಲಾ ಉಸ್ತುವಾರಿ ಜೆ.ಸಿ. ಮಾಧುಸ್ವಾಮಿ, ಸಂಸದ ಜಿ.ಎಸ್. ಬಸವರಾಜು, ಶಾಸಕರಾದ ಮಸಾಲೆ ಜಯರಾಮ್, ಬಿ.ಸಿ. ನಾಗೇಶ್, ಬಿ. ಸತ್ಯನಾರಾಯಣ, ಹೆಚ್.ಡಿ. ರಂಗನಾಥ್, ಗ್ರಾಮೀಣಾಭಿವೃದ್ಧಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಲ್.ಕೆ. ಅತೀಕ್, ಜಿ.ಪಂ. ಅಧ್ಯಕ್ಷೆ ಲತಾ ರವಿಕುಮಾರ್, ಸಿಇಓ ಶುಭಕಲ್ಯಾಣ್ ಮತ್ತಿತರರು ಉಪಸ್ಥಿತರಿದ್ದರು.

Share

Leave a Comment