ಅಂತರಾಷ್ಟ್ರೀಯ ಯೋಗ ದಿನಾಚರಣೆ

@12bc = 9 ಸಾವಿರಕ್ಕೂ ಹೆಚ್ಚು ಯೋಗಾಪಟುಗಳಿಂದ ಯೋಗ
ಮೈಸೂರು, ಜೂ. 19- ಸಾಂಸ್ಕೃತಿಕ ರಾಜಧಾನಿ ಹಾಗೂ ಯೋಗಾ ನಗರಿಯೂ ಆಗಿರುವ ಮೈಸೂರಿನಲ್ಲಿ ನಾಳಿದ್ದು (ಜೂನ್.21) ಅಂತಾರಾಷ್ಟ್ರೀಯ ಯೋಗ ದಿನದಂದು ಎರಡು ದಾಖಲೆಗಳನ್ನು ನಿರ್ಮಿಸಲು ಜಿಲ್ಲಾಡಳಿತ ಸಿದ್ಧವಾಗಿದೆ.
ಮೈಸೂರಿನ ರೇಸ್ ಕೋರ್ಸ್ ಆವರಣದಲ್ಲಿ ಒಂದೇ ಕಾಲಕ್ಕೆ ಒಂದೇ ಸ್ಥಳದಲ್ಲಿ 65ಸಾವಿರಕ್ಕೂ ಹೆಚ್ಚು ಮಂದಿ ಯೋಗಾಪಟುಗಳು ಪಾಲ್ಗೊಳ್ಳಲಿದ್ದಾರೆ. ಈ ಹಿಂದೆ ನವದೆಹಲಿಯಲ್ಲಿರುವ ರಾಜಘಾಟ್‍ನಲ್ಲಿ 38ಸಾವಿರ ಮಂದಿ ಯೋಗ ಪ್ರದರ್ಶನ ನೀಡಿ ದಾಖಲೆಯನ್ನು ನಿರ್ಮಿಸಲಾಗಿತ್ತು. ಇದನ್ನು ಮುರಿಯುವ ಪ್ರಯತ್ನವನ್ನು ಜಿಲ್ಲಾಡಳಿತ ಮಾಡಿದೆ. 2014ರಲ್ಲಿ ತಮಿಳುನಾಡಿನ ಶ್ರೀ ಪೆರಂಬದೂರಿನಲ್ಲಿನ ಶಾಲಾ ಆವರಣದಲ್ಲಿ 3,849 ಮಂದಿ ಯೋಗಾ ಪಟುಗಳು ಲಾಂಗೆಸ್ಟ್ ಯೋಗ ಚೈನ್ (ಅತಿ ಉದ್ದದ ಸರಪಳಿ ಯೋಗ ಪ್ರದರ್ಶನ) ದಾಖಲೆ ಮಾಡಲಾಗಿತ್ತು.
ಈ ದಿಸೆಯಲ್ಲಿ ಇಂದು ಅಂಬಾವಿಲಾಸ ಅರಮನೆ ಆವರಣದಲ್ಲಿ 9,000ಕ್ಕೂ ಹೆಚ್ಚು ಮಂದಿ ಯೋಗಾ ಪಟುಗಳು ಲಾಂಗೆಸ್ಟ್‍ಯೋಗ ಚೈನ್ ಪ್ರದರ್ಶನವನ್ನು ನೀಡುವುದರ ಮೂಲಕ ಸಾಂಸ್ಕೃತಿಕ ನಗರಿಗೆ ಮತ್ತೊಂದು ಗರಿಯನ್ನು ಮೂಡಿಸಲು ಸನ್ನದ್ಧರಾಗಿದ್ದಾರೆ. ಇಂದಿನ ಕಾರ್ಯಕ್ರಮಕ್ಕೆ ಸಲಹೆಗಾರರಾಗಿ ಶೈಲಜಾ ಶ್ರೀನಾಥ್ ಕಾರ್ಯನಿರ್ವಹಿಸುವುದರ ಮೂಲಕ ನಿಯಮಾನುಸಾರ ಗಿನ್ನೀಸ್ ದಾಖಲೆಗಾಗಿ ಸಕಲ ಏರ್ಪಾಡುಗಳನ್ನು ಮಾಡಿಕೊಂಡಿದ್ದಾರೆ.
ನಾಳಿದ್ದು ಬೆಳಿಗ್ಗೆ 6 ಗಂಟೆಯಿಂದ 8 ಗಂಟೆಯವರೆಗೆ ನಗರದ ರೇಸ್‍ಕೋರ್ಸ್ ಆವರಣದಲ್ಲಿ ನಡೆಯಲಿರುವ ಬೃಹತ್ ಮಟ್ಟದ ಸಾಮೂಹಿಕ ಯೋಗ ಪ್ರದರ್ಶನದಲ್ಲಿ 63 ಸಾವಿರಕ್ಕೂ ಹೆಚ್ಚು ಮಂದಿ ಭಾಗವಹಿಸಲಿದ್ದಾರೆ. ರೇಸ್‍ಕೋರ್ಸ್ ಮೈದಾನದಲ್ಲಿ ಗಣ್ಯರಿಗಾಗಿ ಒಂದು ಬೃಹತ್ ವೇದಿಕೆ ಮತ್ತು ಯೋಗಪಟುಗಳ ನಡುವೆ 6*8 ಅಡಿ ಅಳತೆಯ 60 ವೇದಿಕೆಗಳನ್ನು ಅಳವಡಿಸಲಾಗಿದ್ದು ಈ ವೇದಿಕೆಯಲ್ಲಿ ಯೋಗ ಗುರುಗಳು ಯೋಗ ಪ್ರದರ್ಶಿಸುವರು.
2015ರಲ್ಲಿ ನಡೆದ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ 45 ಇಸ್ಲಾಂ ರಾಷ್ಟ್ರಗಳು ಸೇರಿದಂತೆ 177 ರಾಷ್ಟ್ರಗಳು ಪಾಲ್ಗೊಂಡಿದ್ದವು. ವರ್ಷದಿಂದ ವರ್ಷಕ್ಕೆ ತನ್ನ ಖ್ಯಾತಿಯನ್ನು ಹೆಚ್ಚಿಸಿಕೊಳ್ಳುತ್ತಾ ಬಂದಿರುವ ಯೋಗ ದಿನಾಚರಣೆಯಲ್ಲಿ ಈ ಬಾರಿ 192 ರಾಷ್ಟ್ರಗಳು ಭಾಗವಹಿಸಲಿವೆ.
ನಾಳಿದ್ದು ನಡೆಯಲಿರುವ ಅಂತರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ದಾಖಲೆಯನ್ನು ನಿರ್ಮಿಸುವ ಸಲುವಾಗಿ ಜಿಲ್ಲಾಡಳಿತದೊಂದಿಗೆ ಪ್ರವಾಸೋದ್ಯಮ ಇಲಾಖೆ, ಎನ್.ವೈ.ಕೆ ಸ್ವಯಂ ಸಂಸ್ಥೆಗಳಾದ ಜೆ.ಎಸ್.ಎಸ್ ಯೋಗಾ ಫೌಂಡೇಷನ್, ಮೈಸೂರು ಯೋಗಾ ಒಕ್ಕೂಟ, ಬಾಬಾರಾಮ್‍ದೇವ್‍ರವರ ಭಾರತ್ ಸ್ವಾಭಿಮಾನಿ ಟ್ರಸ್ಟ್, ಪತಂಜಲಿ ಯೋಗಾ ಶಿಕ್ಷಣ ಸಂಸ್ಥೆ, ಮೈಸೂರು ಟ್ರಾವಲರ್ಸ್ ಏಜೆಂಟ್ ಅಸೋಸಿಯೇಷನ್, ಮೈಸೂರು ಹೋಟೆಲ್ ಮಾಲೀಕರ ಸಂಘ, ಚಿರಾಗ್ ಆಡ್ಸ್‍ಗಳು ಸೇರಿದಂತೆ ಇನ್ನೂ ಹಲವು ಯೋಗಾಶಾಲೆಗಳು ಕೈಜೋಡಿಸಿವೆ.
ಜೂನ್.21ರಂದು ನಡೆಯಲಿರುವ ಅಂತರಾಷ್ಟ್ರೀಯ ಯೋಗಾ ಕಾರ್ಯಕ್ರಮಕ್ಕೆ 45 ಲಕ್ಷರೂಗಳ ವೆಚ್ಚವಾಗಲಿದೆ. ಪ್ರವಾಸೋದ್ಯಮ ಇಲಾಖೆ 25 ಲಕ್ಷ, ಅರಮನೆ ಮಂಡಳಿ 10 ಲಕ್ಷರೂಗಳ ಅನುದಾನ ನೀಡುತ್ತಿದ್ದು, ಸೈಕಲ್ ಪ್ಯೂರ್ ಅಗರಬತ್ತಿ ಸಂಸ್ಥೆ ಮತ್ತು ವೈಷ್ಣವಿ ಸಂಸ್ಥೆಗಳು ತಲಾ 3 ಲಕ್ಷರೂಗಳನ್ನು ನೀಡುತ್ತಿವೆ.
ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಈಗಾಗಲೇ 15ಸಾವಿರ ಮಂದಿ ತಮ್ಮ ಹೆಸರುಗಳನ್ನು ನೋಂದಾಯಿಸಿಕೊಂಡಿರುತ್ತಾರೆ. ಈ ಯೋಗಾ ಪ್ರದರ್ಶನದಲ್ಲಿ ಪಾಲ್ಗೊಳ್ಳಲು ಆಸಕ್ತಿಯುಳ್ಳವರು 0821-2422096 ಈ ದೂಋವಾಣಿ ಸಂಖ್ಯೆಗೆ ಕರೆ ಮಾಡಿ ತಮ್ಮ ಹೆಸರುಗಳನ್ನು ನೋಂದಾಯಿಸಿಕೊಳ್ಳಬಹುದು. ಅಥವಾ www.yogaday mysuru.com ನಲ್ಲೂ ಸಹಾ ನೋಂದಾಯಿಸಿಕೊಳ್ಳಬಹುದಾಗಿದೆ.
ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಯಶಸ್ವಿಗಾಗಿ ಜಿಲ್ಲಾಧಿಕಾರಿ ಡಿ.ರಂದೀಪ್‍ರವರ ಅಧ್ಯಕ್ಷತೆಯಲ್ಲಿ ಸಮಿತಿಯನ್ನು ರಚಿಸಲಾಗಿದೆ. ಎನ್.ವೈ.ಕೆ.ಯ ಸಮನ್ವಯಾಧಿಕಾರಿ ಎಂ.ಎಸ್ ನಟರಾಜ್ ಪ್ರವಾಸೋದ್ಯಮ ಇಲಾಖೆಯ ಉಪನಿರ್ದೇಶಕ ಜನಾರ್ಧನ್, ಜಿಲ್ಲಾ ಆಯುಷ್ ಅಧಿಕಾರಿ ಡಾ.ಸೀತಾಲಕ್ಷ್ಮೀ, ಜೆ.ಎಸ್.ಎಸ್ ಯೋಗ ಫೌಂಡೇಷನ್ ಅಧ್ಯಕ್ಷ ಶ್ರೀ ಹರಿ, ಕಾಡಾದ ಸಾರ್ವಜನಿಕರ ಸಂಪರ್ಕ ಅಧಿಕಾರಿ ರವಿಕುಮಾರ್, ಮೀಟಾ ಅಧ್ಯಕ್ಷ ಬಿ.ಎಸ್.ಪ್ರಶಾಂತ್, ಚಿರಾಗ್ ಆದ್ ಸಂಸ್ಥೆ ನಿರ್ದೇಶಕ ವಿವೇಕ್ ಹಾಗೂ ಇನ್ನಿತ್ತರರು ಕಾರ್ಯಕ್ರಮದ ಯಶಸ್ಸಿಗೆ ಕಂಕಣಬದ್ದರಾಗಿದ್ದಾರೆ.

Leave a Comment