ಅಂಗವಿಕಲ ಕೋಟಾ ಕಬಳಿಕೆ ತನಿಖೆಗೆ ವಹಿಸಿ

ನೇಮಕಾತಿ ಅಕ್ರಮ ಸರಿಪಡಿಸದಿದ್ದಲ್ಲಿ ಹೋರಾಟ
ರಾಯಚೂರು.ಜು.12- ಅಂಗವಿಕಲರ ಕೋಟಾ ಕಬಳಿಸಿ ಕಾನೂನು ನಿಯಮಾವಳಿ ಸ್ಪಷ್ಟಗಾಳಿಗೆದೂರಿ ಶಿಕ್ಷಕ ಮತ್ತು ಶಿಕ್ಷಕೇತರ ಹುದ್ದೆ ನೇಮಕಾತಿಯಲ್ಲಿ ನಡೆದಿರುವ ಅಕ್ರಮ ಸೂಕ್ತ ತನಿಖೆಗೊಳಪಡಿಸಿ ಅನ್ಯಾಯಕ್ಕೊಳಗಾಗಿರುವ ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸಿಕೊಡದಿದ್ದಲ್ಲಿ ರಾಯಚೂರು ಕೃಷಿ ವಿಶ್ವವಿದ್ಯಾಲಯ ಸಿಂಡಿಕೇಟ್ ಸದಸ್ಯರು ಹಾಗೂ ಅಧಿಕಾರಿಗಳ ವಿರುದ್ಧ ಉಗ್ರ ಹೋರಾಟ ರೂಪಿಸಲಾಗುವುದೆಂದು ಹೈದ್ರಾಬಾದ್ ಕರ್ನಾಟಕ ಪ್ರದೇಶ ವಾಲ್ಮೀಕಿ ನಾಯಕ ಸಂಘ ವಿಭಾಗೀಯ ಕಾರ್ಯದರ್ಶಿ ಎನ್.ರಘುವೀರ ನಾಯಕ ಎಚ್ಚರಿಸಿದರು.
ಅವರಿಂದು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿ, ರಾಯಚೂರು ಕೃಷಿ ವಿಶ್ವವಿದ್ಯಾಲಯ ವತಿಯಿಂದ 2017ರಲ್ಲಿ ನಡೆದ ಶಿಕ್ಷಕ, ಶಿಕ್ಷಕೇತರ ಹುದ್ದೆಗಳ ನೇಮಕಾತಿಯಲ್ಲಿ ಅಕ್ರಮ ಮೇಲ್ನೋಟಕ್ಕೆ ಸಾಬೀತುಗೊಳ್ಳುವಂತಾಗಿದೆ. ವಿದ್ಯೆ ನೀಡಿದ ಕಾಲೇಜಿನಲ್ಲಿಯೇ ಪ್ರತಿಭಾನ್ವಿತ ಅಭ್ಯರ್ಥಿ ನ್ಯಾಯಯುತ ಹುದ್ದೆ ನೀಡುವಲ್ಲಿ ವಂಚನೆ ವಿವಿ ನೇಮಕಾತಿ ಪ್ರಕ್ರಿಯೆಯನ್ನೇ ಅನುಮಾನಿಸುವಂತೆ ಮಾಡಿದೆ.
ಪರಿಶಿಷ್ಟ ಪಂಗಡ ಸಮುದಾಯಕ್ಕೆ ಸೇರಿದ ಡಾ.ವಿ.ಹನುಮಂತ ನಾಯಕ ಎನ್ನುವ ಪಿಹೆಚ್‌ಡಿ ಪದವೀಧರರು ಸಸ್ಯ ತಳಿ ಅಭಿವೃದ್ಧಿ ಶಾಸ್ತ್ರ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ ಹೈದ್ರಾಬಾದ್ ಕರ್ನಾಟಕ ಕೋಟಾದಡಿ ಸಂದರ್ಶನಕ್ಕೆ ಹಾಜರಾಗುವ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದರು. ಸಸ್ಯ ತಳಿ ಅಬಿವೃದ್ಧಿ ಶಾಸ್ತ್ರ ಸಹಾಯಕ ಪ್ರಾಧ್ಯಾಪಕ ಒಟ್ಟು ಏಳು ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿ ಮೌಖಿಕ ಸಂದರ್ಶನದಲ್ಲಿ ಅತಿ ಹೆಚ್ಚು ಅಂಕ ಪಡೆದ ಡಾ.ವಿ.ಹನುಮಂತ ನಾಯಕ ರವರಿಗೆ ನ್ಯಾಯಯುತ ಎಸ್ಟಿ ಕೋಟಾ ನಿಯುಕ್ತಿ ಹೊರತು ಪಡಿಸಿ, ಅಂಗವಿಕಲರಿಗೆ ಮೀಸಲಿರುವ ಜನರಲ್ ಮೆರಿಟ್‌ನಲ್ಲಿ ಹುದ್ದೆ ನೀಡಲಾಗಿದೆ.
ದಾಖಲೆ ಸಿದ್ಧಪಡಿಸಿದ ಸಂದರ್ಭದಲ್ಲಿ ಸ್ಟಾರ್ ಗುರುತು ನೀಡಿ ನೋ ಕ್ಲೀಯರ್ ಎನ್ಓಸಿ ಎಂದು ನಮೂದು ಮಾಡುವ ಮೂಲಕ ಸ್ಥಾನ ವಂಚನೆಗೆ ಸಂಬಂಧಪಟ್ಟ ಕೃಷಿ ವಿವಿ ಸಿಂಡಿಕೇಟ್ ಸದಸ್ಯರು, ಅಧಿಕಾರಿಗಳು ಕಾರಣರಾಗಿದ್ದಾರೆ. ನಿಯಮಾನುಸಾರ ಅಂಗವಿಕಲರಿಗೆ ಮೀಸಲಿರುವ ಸ್ಥಾನಕ್ಕೆ ಸತತ ಎರಡು ಬಾರಿ ಅರ್ಹ ಅಭ್ಯರ್ಥಿ ಅರ್ಜಿ ಸಲ್ಲಿಸದಿದ್ದಲ್ಲಿ ಸಿಂಡಿಕೇಟ್ ಸದಸ್ಯರ ಅನುಮತಿ ಮೇರೆಗೆ ಜನರಲ್ ಮೆರಿಟ್ ಸಾಮಾನ್ಯ ಎಂದು ಪರಿಗಣಿಸಬೇಕು.
ಹನುಮಂತು ನಾಯಕ ಲಿಖಿತ ಒಪ್ಪಿಗೆ ಪಡೆಯದೇ ಎಸ್ಟಿ ಕೋಟಾದಡಿ ವೇಟಿಂಗ್ ಲೀಸ್ಟ್‌ನಲ್ಲಿದ್ದ ಬೀದರ್ ಮೂಲದ ಡಾ.ಪ್ರವೀಣ್ ಕುಮಾರ ಎನ್ನುವವರಿಗೆ ಸದರಿ ಹುದ್ದೆ ನಿಯುಕ್ತಿ ತರಾತುರಿ ಆದೇಶ ನೀಡಲಾಗಿದೆ. ರಾಜ್ಯದ ಎಲ್ಲಾ ವಿಶ್ವವಿದ್ಯಾಲಯಗಳಲ್ಲಿ ನೇಮಕಾತಿ ಪಟ್ಟಿಯ ವೆಬ್ ಸೈಟ್‌ನಲ್ಲಿ ವೇಟಿಂಗ್ ಲೀಸ್ಟ್ ಪ್ರಕಟಿಸಿ 15 ದಿನ ಆಕ್ಷೇಪಣೆಗೆ ಕಾಲಾವಕಾಶ ನೀಡಿದರೇ, ರಾಯಚೂರು ಕೃಷಿ ವಿಶ್ವವಿದ್ಯಾಲಯ ನೇಮಕಾತಿ ಪ್ರಕ್ರಿಯೆ ಪೂರ್ಣಗೊಂಡು 7 ತಿಂಗಳು ಗತಿಸಿದರೂ, ನೇಮಕಾತಿ ಪಟ್ಟಿ ಪ್ರಕಟಗೊಳ್ಳದಿರುವುದು ಕಾನೂನಿಂದ ಸ್ಪಷ್ಟ ಉಲ್ಲಂಘನೆಯಾಗಿದೆ. ವೆಬ್ ಸೈಟ್‌ನಲ್ಲಿ ನಡಾವಳಿ ಪ್ರಕಟಣೆ ಕಾನೂನನ್ನು ಸಿಂಡಿಕೇಟ್ ಸದಸ್ಯರು ಕನಿಷ್ಟ ಪಾಲನೆ ಮಾಡದಿರಲು ಮೇಲ್ಕಂಡ ನೇಮಕಾತಿ ಅಕ್ರಮ ಎನ್ನುವುದಕ್ಕೆ ನಿದರ್ಶನವಾಗಿದೆ.
ರಾಯಚೂರು ವಿವಿ ಹಾಗೂ ಧಾರವಾಡ ಕೃಷಿ ವಿವಿಯಲ್ಲಿ ಸಸ್ಯ ತಳಿ ಅಭಿವೃದ್ಧಿ ಶಾಸ್ತ್ರ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕ ಹುದ್ದೆಗೆ ಅರ್ಜಿ ಸಲ್ಲಿಸಿದ ಹನುಮಂತ ನಾಯಕ, ಧಾರವಾಡ ಕೃಷಿ ವಿವಿಯಲ್ಲಿ ಸಂದರ್ಶನಕ್ಕೆ ಮೊದಲು ಹಾಜರಾಗಿ ನೇಮಕ ಮಾಡಿದ್ದರು. ನಂತರ ದಿನಗಳಲ್ಲಿ ರಾಯಚೂರು ಕೃಷಿ ವಿವಿ ನೇಮಕಾತಿ ಸಂದರ್ಶನದಲ್ಲಿ ಧಾರವಾಡ ಕೃಷಿ ವಿವಿಯ ನಿರಾಕ್ಷೇಪಣಾ ಪ್ರಮಾಣ ಪತ್ರ ಸಮೇತ ಎಲ್ಲಾ ದಾಖಲೆ ಸಲ್ಲಿಕೆ ಮಾಡಿ, ನೇಮಕಾತಿ ವಂಚನೆ ಕುರಿತು ಕುಲ ಸಚಿವರಿಗೆ ಮನವರಿಕೆ ಮಾಡಿದರೂ ಮೇಲ್ಕಂಡ ಅಧಿಕಾರಿಗಳು ಪ್ರತಿಭಾನ್ವಿತ ವಿದ್ಯಾರ್ಥಿಗೆ ಪರಿಶಿಷ್ಟ ಪಂಗಡ ಕೋಟಾದಡಿ ಹುದ್ದೆ ನೀಡದೇ ವಂಚಿಸಲಾಗಿದೆ.
ಈ ಮೇಲ್ಕಂಡ ಅಕ್ರಮ ನೇಮಕಾತಿ ಸೂಕ್ತ ತನಿಖೆಗೊಳಪಡಿಸಿ ಅನ್ಯಾಯಕ್ಕೊಳಗಾಗಿರುವ ಅಭ್ಯರ್ಥಿಗಳಿಗೆ ನ್ಯಾಯ ಒದಗಿಸಿ ಅರ್ಹ ಹುದ್ದೆ ನೀಡದಿದ್ದಲ್ಲಿ ಈ ಅಕ್ರಮಕ್ಕೆ ಕಾರಣರಾಗಿರುವ ಸಿಂಡಿಕೇಟ್ ಸದಸ್ಯರು ವಿವಿ ಅಧಿಕಾರಿಗಳ ವಿರುದ್ಧ ರಸ್ತೆಗಿಳಿದು ಉಗ್ರ ಚಳುವಳಿ ರೂಪಿಸಲಾಗುವುದೆಂದರು.
ಹನುಮಂತ ನಾಯಕ, ರಾಚಣ್ಣ ನಾಯಕ, ರಮೇಶ ನಾಯಕ, ವೀರೇಶ ನಾಯಕ ಉಪಸ್ಥಿತರಿದ್ದರು.

Leave a Comment