ಅಂಗಡಿಗೆ ನುಗ್ಗಿ ಕಳವು

ಬಂಟ್ವಾಳ, ಸೆ.೯- ಇಲ್ಲಿನ ರಾಯಿ ಗ್ರಾಮ ಪಂಚಾಯಿತಿ ವತಿಯಿಂದ ಬಂಟ್ವಾಳ -ಮೂಡುಬಿದ್ರೆ ಮುಖ್ಯ ರಸ್ತೆ ಬಳಿ ನಿರ್ಮಿಸಿ ಬಾಡಿಗೆಗೆ ನೀಡಿದ ಕಟ್ಟಡದಲ್ಲಿ ವ್ಯಕ್ತಿಯೊಬ್ಬರು ಕಳೆದ ಮೂರು ವರ್ಷಗಳಿಂದ ನಡೆಸುತ್ತಿದ್ದ ಮೊಬೈಲ್ ರಿಚಾರ್ಜ್ ಮತ್ತು ಚಪ್ಪಲಿ ಮಾರಾಟ ಅಂಗಡಿ ಶಟರ್ ಬೀಗ ಮುರಿದು ಕಳ್ಳರು ನುಗ್ಗಿದ ಘಟನೆ ನಿನ್ನೆ ಬೆಳಗ್ಗೆ ಬೆಳಕಿಗೆ ಬಂದಿದೆ.
ಇಲ್ಲಿನ ರಾಯಿ ಸಮೀಪದ ಕನ್ಯಾ ನಿವಾಸಿ ಪರಮೇಶ್ವರ ಪೂಜಾರಿ ಎಂಬವರು ಕಳೆದ ಮೂರು ವರ್ಷಗಳಿಂದ ಅಂಗಡಿ ವ್ಯವಹಾರ ನಡೆಸುತ್ತಿದ್ದು, ಶುಕ್ರವಾರ ರಾತ್ರಿ ಸುಮಾರು ಎಂಟೂವರೆ ಗಂಟೆಗೆ ಇವರ ಪತ್ನಿ ಉಷಾ ಪೂಜಾರಿ ಎಂದಿನಂತೆ ಅಂಗಡಿಗೆ ಬೀಗ ಹಾಕಿ ಮನೆಗೆ ತೆರಳಿದ್ದರು. ನಿನ್ನೆ ಬೆಳಿಗ್ಗೆ ಏಳು ಗಂಟೆಗೆ ಎಂದಿನಂತೆ ಇವರ ಪುತ್ರ ಲತೇಶ್ ಕುಮಾರ್ ಅವರು ಅಂಗಡಿ ಬಳಿ ಬೈಕ್ ನಿಲ್ಲಿಸಿ ಬಸ್ಸಿನಲ್ಲಿ ಮಂಗಳೂರಿಗೆ ಕೆಲಸಕ್ಕೆ ಹೋಗಲು ಬಂದಾಗ ಅಂಗಡಿ ಶಟರ್ ಮೇಲೆತ್ತಿರುವುದು ಕಂಡು ಬಂದಿದೆ. ಇದೇ ವೇಳೆ ಅಂಗಡಿಗೆ ಏಕೆ ಬಾಗಿಲು ಹಾಕಿಲ್ಲ ಎಂದು ಅವರು ಮೊಬೈಲ್ ಕರೆ ಮಾಡಿ ತಾಯಿಗೆ ಪ್ರಶ್ನಿಸಿದಾಗಲೇ ಕಳವು ನಡೆದಿರುವುದು ಗಮನಕ್ಕೆ ಬಂದು ಗ್ರಾಮಾಂತರ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಅಂಗಡಿಯೊಳಗೆ ಪರ್ಸಿನಲ್ಲಿದ್ದ ರೂ ೫ಸಾವಿರ ಮೊತ್ತದ ನಗದು ಮತ್ತು ನಾಲ್ಕು ಜೊತೆಗ ಬೆಲೆ ಬಾಳುವ ಚಪ್ಪಲಿ ಎಗರಿಸಿ ಕಳ್ಳರು ಪರಾರಿಯಾಗಿದ್ದಾರೆ. ಈ ಬಗ್ಗೆ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಇಲ್ಲಿನ ಪಂಚಾಯಿತಿ ಮತ್ತು ಅಂಗಡಿಯೊಂದರ ಎದುರು ಅಳವಡಿಸಿರುವ ಸಿಸಿ ಕ್ಯಾಮೆರಾ ಫೂಟೇಜ್ ಸಹಿತ ಕಳ್ಳರ ಚಲನ ವಲನ ಗಮನಿಸುವ ಪರಿಶೀಲನೆ ನಡೆಸಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಅಣ್ಣಳಿಕೆ ಮಾದರಿ ಕಳವು:
ಕಳೆದ ಒಂದು ವಾರದ ಹಿಂದೆಯಷ್ಟೇ ಇದೇ ಪರಿಸರದ ಅಣ್ಣಳಿಕೆ ಎಂಬಲ್ಲಿ ಪಂಜಿಕಲ್ಲು ನಿವಾಸಿ ಹರೀಶ ಸಪಲ್ಯ ಎಂಬವರು ನಡೆಸುತ್ತಿರುವ ಪಂಪ್ ದುರಸ್ತಿ ಅಂಗಡಿಗೆ ನುಗ್ಗಿದ ನಾಲ್ವರು ಕಳ್ಳರು ರೂ ೧.೫ಲಕ್ಷ ಮೌಲ್ಯದ ಪಂಪು ಎಗರಿಸಿ ಪರಾರಿಯಾಗಿದ್ದರು. ಇಲ್ಲಿ ಕೂಡಾ ಅದೇ ಮಾದರಿಯಲ್ಲಿ ಶಟರ್ ಬೀಗ ಮುರಿದು ಕಳವು ನಡೆಸಿರುವುದು ಹಲವು ಸಂಶಯಗಳಿಗೆ ಕಾರಣವಾಗಿದೆ. ಇದಕ್ಕೂ ಮೊದಲು ಬಂಟ್ವಾಳ-ಮೂಡುಬಿದ್ರೆ ರಸ್ತೆ ನಡುವಿನ ಲೊರೆಟ್ಟೊ ಕಮಲ್ ಕಟ್ಟೆ ಎಂಬಲ್ಲಿ ರಾತ್ರಿ ಸುಮಾರು ಒಂದೂವರೆ ಗಂಟೆಗೆ ನುಗ್ಗಿದ ನಾಲ್ವರು ಕಳ್ಳರ ತಂಡವು ಮನೆ ಮಾಲೀಕ ಮತ್ತು ಅವರ ಪುತ್ರಿಯನ್ನು ಕಟ್ಟಿ ಹಾಕಿ ಮನೆಯೊಡತಿ ಅವರನ್ನು ಚಾಕು ತೋರಿಸಿ ಕಪಾಟಿನಲ್ಲಿದ್ದ ಅಪಾರ ಪ್ರಮಾಣದ ಚಿನ್ನಾಭರಣ ಎಗರಿಸಿ ಪರಾರಿ ಆಗಿದ್ದರೂ ಕಳ್ಳರು ಪತ್ತೆಯಾಗದಿರುವುದು ಇಲ್ಲಿನ ನಾಗರಿಕರಲ್ಲಿ ಆತಂಕಕ್ಕೆ ಕಾರಣವಾಗಿದೆ.

Leave a Comment