ಅಂಕಿತ ಶಾಲೆಯ ಸೇವೆಗೆ ಶ್ಲಾಘನೆ

ಚಿಕ್ಕನಾಯಕನಹಳ್ಳಿ, ಫೆ. ೨- ಕಾನ್ವೆಂಟ್ ಎಂಬ ಶಬ್ದವೇ ಗೊತ್ತಿಲ್ಲದ ಸಮಯದಲ್ಲಿ 25 ವರ್ಷಗಳ ಹಿಂದೆ ಗ್ರಾಮೀಣ ಪ್ರದೇಶದಲ್ಲಿ ಇಂಗ್ಲೀಷ್ ಕಾನ್ವೆಂಟ್ ಪ್ರಾರಂಭಿಸಿ ಶಿಕ್ಷಣ ನೀಡಲು ಪ್ರಾರಂಭಿಸಿದ ಅಂಕಿತ ಶಾಲೆಯ ಸೇವೆ ಶ್ಲಾಘನೀಯವಾದುದು ಎಂದು ಚಲನಚಿತ್ರ ನಿರ್ದೇಶಕ ಬಿ.ಎಸ್. ಲಿಂಗದೇವರು ಹೇಳಿದರು.

ಪಟ್ಟಣದ ಅಂಕಿತ ಶಾಲೆಯ 25ನೇ ಬೆಳ್ಳಿಹಬ್ಬ ಆಚರಣೆಯ ಅಂಕಿತ ಉತ್ಸವ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಈ ಶಾಲೆಯಲ್ಲಿ ವಿದ್ಯಾಭ್ಯಾಸ ಮುಗಿಸಿದ ವಿದ್ಯಾರ್ಥಿಗಳು ಬೇರೆ ಬೇರೆ ನಗರಗಳಿಗೆ ಹೋಗಿ ಜೀವನ ನಿರ್ವಹಿಸುತ್ತಿರುವವರು. ನಾವು ಹುಟ್ಟಿದ ಊರು, ತಂದೆ- ತಾಯಿ ಹಾಗೂ ವಿದ್ಯೆ ಕಲಿಸಿದ ಗುರುಗಳನ್ನು ನೆನಪಿಸಿಕೊಳ್ಳಬೇಕು. ಇದು ನಮಗೆ ಭಾವನಾತ್ಮಕ ಸಂಬಂಧವನ್ನು ಕಲ್ಪಿಸಿಕೊಡುತ್ತದೆ. ಸಿ.ಬಿ.ಎಸ್.ಸಿ ಎಂಬ ಶಿಕ್ಷಣ ವಿದೇಶಿಯ ಶಿಕ್ಷಣದ ಬದಲು ಸ್ಥಳೀಯ ಶಿಕ್ಷಣದ ಅಗತ್ಯತೆ ಇದೆ ಎಂದರು.

ಕೆ.ಪಿ. ರವಿಕುಮಾರ್ ಮಾತನಾಡಿ, ಮುಂದಿನ ದಿನಗಳಲ್ಲಿ ನಾವು ಎಷ್ಟು ಉನ್ನತ ಸ್ಥಾನದಲ್ಲಿ ಉತ್ತೀರ್ಣರಾಗಿದ್ದೇವೆ. ಎಷ್ಟು ಅಂಕ ಪಡೆದು ಉನ್ನತ ವ್ಯಾಸಂಗಕ್ಕೆ ತೆರಳುತ್ತೇವೆ ಎನ್ನುವ ಬದಲು ನಾವು ಕೌಶಲ್ಯ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಬೇಕು ಎಂದ ಅವರು, ಯುವಕರಿಂದಲೆ ದೇಶ ಅಭಿವೃದ್ದಿ ಹೊಂದಲು ಸಾಧ್ಯ. ಯುವಕರಾದ ನೀವು ರಾಷ್ಟ್ರ ರಕ್ಷಣೆಯ ಸೈನ್ಯಕ್ಕೆ ಸೇರುವ ಮನೋಭಾವ ರೂಢಿಸಿಕೊಳ್ಳಿ ಎಂದು ಸಲಹೆ ನೀಡಿದರು.

ಶಾಸಕ ಸಿ.ಬಿ. ಸುರೇಶ್‍ಬಾಬು ಮಾತನಾಡಿ, ವಿದ್ಯೆ ಸಾಧಕನ ಸ್ವತ್ತು. ಅಂಕಿತ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದ ನೂರಾರು ವಿದ್ಯಾರ್ಥಿಗಳು ಉನ್ನತ ವ್ಯಾಸಂಗ ಮಾಡುತ್ತಿದ್ದಾರೆ ಹಾಗೂ ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ವಿದ್ಯೆ ಎಲ್ಲರಿಗೂ ಒಲಿಯುವುದಿಲ್ಲ. ಇದಕ್ಕೆ ಶ್ರದ್ದೆ ಬೇಕು, ಕೆಲವರಿಗೆ ಕ್ರೀಡೆ, ಸಾಂಸ್ಕೃತಿಕ ಕಾರ್ಯಕ್ರಮ, ಚಿತ್ರಕಲೆ, ಸಂಗೀತದ ಬಗ್ಗೆ ಶ್ರದ್ದೆ ಇರುತ್ತದೆ. ಅಂತಹವರಿಗೆ ಒತ್ತು ನೀಡಿ ಎಂದು ಸಲಹೆ ನೀಡಿದ ಅವರು, ಗ್ರಾಮ ದೇವತೆ ಎಲ್ಲಮ್ಮ ದೇವಾಲಯದಲ್ಲಿ 25 ವರ್ಷಗಳ ಹಿಂದೆ ಪ್ರಾರಂಭವಾದ ಅಂಕಿತ ವಿದ್ಯಾಸಂಸ್ಥೆ ಇಂದು 25 ವರ್ಷದ ಬೆಳ್ಳಿ ಹಬ್ಬ ಆಚರಿಸುತ್ತಿರುವುದು ಸಂತೋಷದ ಸಂಗತಿ ಎಂದರು.
ಇದೇ ಸಂದರ್ಭದಲ್ಲಿ ಅಂಕಿತ ಶಾಲೆಯಲ್ಲಿ ವ್ಯಾಸಂಗ ಮಾಡಿ ಉನ್ನತ ಶಿಕ್ಷಣ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಶಾಲಾ ಮಕ್ಕಳಿಂದ ಸಾಂಸ್ಕ್ರತಿಕ ಕಾರ್ಯಕ್ರಮಗಳು ನಡೆಯಿತು.

ಕಾರ್ಯಕ್ರಮದಲ್ಲಿ ಪುರಸಭಾಧ್ಯಕ್ಷ ಎಚ್.ಬಿ. ಪ್ರಕಾಶ್, ಜೀವವಿಮಾ ಇಲಾಖೆಯ ಕೆ.ಎಸ್. ಸುದರ್ಶನ್, ರುದ್ರಮುನಿಸ್ವಾಮಿ, ಅಂಕಿತ ಶಿಕ್ಷಣ ಸಂಸ್ಥೆಯವರು ಉಪಸ್ಥಿತರಿದ್ದರು.

Leave a Comment