ಅಂಕಗಳೇ ವಿದ್ಯಾರ್ಥಿಗಳ ಮಾನದಂಡವಲ್ಲ

ಸಾಣೇಹಳ್ಳಿ, ಫೆ.13; ವಿದ್ಯಾರ್ಥಿಗಳು ಕೇವಲ ಅಂಕಗಳಿಕೆಗÀಷ್ಟೇ ಒತ್ತು ನೀಡದೆ ಕಲೆ, ಸಾಹಿತ್ಯ, ಸಂಗೀತ, ನೃತ್ಯ, ನಾಟಕ ಮುಂತಾದ ಕಲೆಗಳನ್ನು ಕಲಿಸುವ ಮುಖೇನ ಸರ್ವತೋಮುಖ ಬೆಳವಣಿಗೆಯನ್ನು ಇಲ್ಲಿನ ವಿದ್ಯಾರ್ಥಿಗಳು ಹೊಂದುತ್ತಿದ್ದಾರೆ ಎಂದು ದಾವಣಗೆರೆಯ ಮಾಕನೂರು ಮಲ್ಲೇಶಪ್ಪ ಶಿಕ್ಷಣ ಮಹಾವಿದ್ಯಾಲಯದ ನಿವೃತ್ತ ಪ್ರಾಚಾರ್ಯ ಡಾ. ಹೆಚ್ ವಿ ವಾಮದೇವಪ್ಪ ಹೇಳಿದರು.
ಇಲ್ಲಿನ ಶಿವಕುಮಾರ ಬಯಲು ರಂಗಮಂದಿರದಲ್ಲಿ ಆಯೋಜಿಸಿದ್ದ ಶ್ರೀ ಗುರುಪಾದೇಶ್ವರ ಪ್ರೌಢಶಾಲೆ ಮತ್ತು ಶ್ರೀ ಶಿವಕುಮಾರ ಸ್ವಾಮೀಜಿ ಹಿರಿಯ ಪ್ರಾಥಮಿಕ ಶಾಲೆಗಳ ವಿದ್ಯಾರ್ಥಿ ಸಂಘಗಳ ಸಮಾರೋಪ ನುಡಿಗಳನ್ನಾಡಿದ ಅವರು ಶಿಕ್ಷಕರು ಬರೆಸಿದ ನೋಟ್ಸ್‍ಗಳನ್ನು ಕಂಠಪಾಠಮಾಡಿ ಪರೀಕ್ಷೆ ಬರೆಯುವುದು ಸರಿಯಲ್ಲ. ಬದಲಾಗಿ ಪಠ್ಯಪುಸ್ತಕವನ್ನು ಸಮಗ್ರವಾಗಿ ಓದಿ ಪರೀಕ್ಷೆಗಳನ್ನು ಎದುರಿಸಿದರೆ ಮುಂದಿನ ವಿದ್ಯಾಭ್ಯಾಸಕ್ಕೆ ತಳಹದಿಯನ್ನು ಹಾಕಿದಂತಾಗುತ್ತದೆ. ವಿದ್ಯಾರ್ಥಿಗಳು ಪ್ರಶ್ನೆ ಕೇಳುವ ಮನೋಭಾವ ಬೆಳೆಸಿಕೊಳ್ಳಬೇಕು. ಓದುವಾಗ ಮುಖ್ಯಾಂಶಗಳನ್ನು ಒಂದೆಡೆ ಬರೆದಿಟ್ಟು ಪರೀಕ್ಷಾ ಸಮಯದಲ್ಲಿ ಅವಲೋಕನ ಮಾಡಿಕೊಳ್ಳಬೇಕು. ಇಲ್ಲಿ ವಿದ್ಯಾರ್ಥಿಗಳಿಗೆ ಬಹುಮಾನವಾಗಿ ಡಿಕ್ಷನರಿಗಳನ್ನು ನೀಡಿದ್ದು ಸ್ತುತ್ಯಾರ್ಹವಾದುದು. ಇದು ಮಕ್ಕಳಿಗೆ ಜೀವನಪೂರ್ತಿ ಸಹಾಯಕ್ಕೆ ಬರುತ್ತದೆ. ಬೇರೆಯವರೊಡನೆ ಚರ್ಚೆ ಮಾಡಿದಷ್ಟೂ ಜ್ಞಾನ ಹೆಚ್ಚುವುದು. ವಿದ್ಯಾರ್ಥಿ ದೆಸೆಯಲ್ಲಿಯೇ ದೊಡ್ಡ ದೊಡ್ಡ ಗುರಿಗಳನ್ನು ಇಟ್ಟುಕೊಳ್ಳಬೇಕು. ಪೋಷಕರು ವಿದ್ಯಾರ್ಥಿಗಳಿಂದ ಮೊಬೈಲ್ ಮತ್ತು ಟಿವಿಗಳು ದೂರ ಇರುವಂತೆ ನೋಡಿಕೊಳ್ಳಬೇಕು. ಸರಿಯಾದ ಪ್ರೋತ್ಸಾಹ ಸಿಕ್ಕರೆ ಎಂಥಹ ಸಾಧನೆಯನ್ನಾದರೂ ಮಾಡಬಹುದು ಎನ್ನುವುದಕ್ಕೆ ಜಗಳೂರು ತಾಲ್ಲೂಕಿನ ರೇವತಿನಾಯ್ಕ ಅನ್ನುವ ಬಡಹುಡುಗಿ ಅಂತರಾಷ್ಟ್ರೀಯ ಮಟ್ಟದ ಈಜು ಪಟುವಾಗಿರುವುದೇ ಸಾಕ್ಷಿ. ಬಿ ಎ ಓದುವವರು ದಡ್ಡರಲ್ಲ. ಈಗಿನ ಡಿ ಐ ಜಿ ರೂಪಾ ಬಿ ಎ ಓದಿ, ಐಪಿಎಸ್ ಆಫೀಸರ್ ಆಗಿರುವುದು ಅವರ ಪೋಷಕರ ಪ್ರೋತ್ಸಾಹದಿಂದ. ವಿದ್ಯಾರ್ಥಿಗಳನ್ನು ಇನ್ನೊಬ್ಬರೊಡನೆ ಹೋಲಿಸುವುದು ಸರಿಯಲ್ಲ. ದಾವಣಗೆರೆಯ ವಿಜಯಲಕ್ಷಿö್ಮ ಅನ್ನುವ ವಿದ್ಯಾರ್ಥಿನಿ ಈಗ ಅಮೇರಿಕಾದ ವರ್ಜಿನೀಯಾ ವಿಶ್ವವಿದ್ಯಾನಿಲಯದಲ್ಲಿ ವಿಜ್ಞಾನಿಯಾಗಿ ಕೆಲಸ ಮಾಡುತ್ತಿದ್ದಾಳೆ. ಅಂಕಗಳೇ ವಿದ್ಯಾರ್ಥಿಗಳ ಮಾನದಂಡವಲ್ಲ. ಪ್ರತಿಯೊಂದು ಮಗುವಿನಲ್ಲೂ ಒಂದಲ್ಲ ಒಂದು ಸಾಮಥ್ರ್ಯವಿರುತ್ತದೆ. ಅದನ್ನು ಗುರುತಿಸಿ ಪ್ರೋತ್ಸಾಹಿಸಬೇಕು. ಶಿಕ್ಷಣ ಕೇವಲ ಜೀವನೋಪಾಯಕ್ಕಾಗಿ ಇರುವಂಥದ್ದಲ್ಲ. ಸಮಾಜಕ್ಕೆ ಏನದರೂ ಕೊಡುಗೆ ನೀಡುವಂತೆ ಮಕ್ಕಳ ದೃಷ್ಟಿಕೋನವನ್ನು ವಿಶಾಲಗೊಳಿಸಬೇಕು. ಅಬ್ದುಲ್ ಕಲಾಮ್ ಅವರ ಸಾಮಾಜಿಕ ಕಳಕಳಿ ನಮ್ಮ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಬೇಕು ಎಂದರು.
ಶಿವಕುಮಾರ ಸ್ವಾಮಿಜಿ ವಿದ್ಯಾವರ್ಧಕ ಸಂಘದ ಉಪಾಧ್ಯಕ್ಷ ಡಿ ವಿ ಗಂಗಾಧರಪ್ಪ ಮಾತನಾಡಿ ಪರಿಶ್ರಮವಿಲ್ಲದೆ ಯಾವ ಫಲವೂ ಸಿಗದು. ವಿದ್ಯಾರ್ಥಿಗಳೂ ಇದಕ್ಕೆ ಹೊರತಲ್ಲ. ಈಗ ಪರಿಶ್ರಮಪಟ್ಟರೆ ಮುಂದೆ ಉತ್ತಮ ಫಲವನ್ನು ಪಡೆಯಬಹುದು. ಮಕ್ಕಳು ಖಾಲಿ ಚೀಲಗಳಿದ್ದಂತೆ. ಆ ಚೀಲದಲ್ಲಿ ಏನು ಬೇಕಾದರೂ ತುಂಬಬಹುದು. ಪೋಷಕರು ಮತ್ತು ಶಿಕ್ಷಕರು ವಿವೇಚನೆಯಿಂದ ಚೀಲವನ್ನು ತುಂಬಬೇಕು. ಶಿಕ್ಷಕ ವೃತ್ತಿ ಅತ್ಯಂತ ಪವಿತ್ರವಾದುದು. ಅಬ್ದುಲ್ ಕಲಾಮ್ ಮತ್ತು ರಾಧಕೃಷ್ಣ ಅವರು ಶಿಕ್ಷಕರಾಗಿದ್ದವರು. ಅವರ ರಾಷ್ಟ್ರಪತಿಯ ಅವಧಿಗಳು ಕಳಂಕರಹಿತವಾಗಿರುವುದಕ್ಕೆ ಅವರು ಶಿಕ್ಷಕರಾಗಿದ್ದುದೇ ಕಾರಣ. ಸಮಯವನ್ನು ವ್ಯರ್ಥಮಾಡದೆ ಸದುಪಯೋಗ ಪಡಿಸಿಕೊಳ್ಳುವ ಗುಣವನ್ನು ಮಕ್ಕಳು ಈಗಿನಿಂದಲೇ ರೂಢಿಸಿಕೊಳ್ಳಬೇಕು ಎಂದರು.
ವೇದಿಕೆಯ ಮೇಲೆ ಮುಖ್ಯ ಶಿಕ್ಷಕರಾದ ಹೊನ್ನೇಶಪ್ಪ, ಸಂಗಾಪುರ ಮತ್ತು ಶಿವಕುಮಾರ ಹಾಗೂ ಹೊಸದುರ್ಗ ಕ್ಷೇತ್ರಶಿಕ್ಷಣಾಧಿಕಾರಿ ಉಮಾಮಹೇಶ್ವರಪ್ಪ ಉಪಸ್ಥಿತರಿದ್ದರು.

Leave a Comment